ADVERTISEMENT

ನಾಗ್ಪುರದಲ್ಲಿದ್ದ ಅಫ್ಗಾನ್‌ ವ್ಯಕ್ತಿ ತಾಲಿಬಾನ್‌ಗೆ ಸೇರ್ಪಡೆ

ಕಾನೂನುಬಾಹಿರವಾಗಿ 10 ವರ್ಷಗಳಿಂದ ವಾಸಿಸುತ್ತಿದ್ದ ವ್ಯಕ್ತಿ

ಪಿಟಿಐ
Published 20 ಆಗಸ್ಟ್ 2021, 11:05 IST
Last Updated 20 ಆಗಸ್ಟ್ 2021, 11:05 IST
.
.   

ನಾಗ್ಪುರ: ಕಳೆದ ಹತ್ತು ವರ್ಷಗಳಿಂದ ನಾಗ್ಪುರದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ ಅಫ್ಗಾನಿಸ್ತಾನದ ವ್ಯಕ್ತಿಯೊಬ್ಬ ತಾಲಿಬಾನ್‌ ಸೇರಿರುವುದು ಈಗ ಗೊತ್ತಾಗಿದೆ.

ಇದೇ ವರ್ಷದ ಜೂನ್‌ ತಿಂಗಳಲ್ಲಿ ಈತನನ್ನು ಅಫ್ಗಾನಿಸ್ತಾನಕ್ಕೆ ಗಡಿಪಾರು ಮಾಡಲಾಗಿತ್ತು. ಕೈಯಲ್ಲಿ ರೈಫಲ್‌ ಹಿಡಿದಿರುವ ಈತನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈತನನ್ನು ನೂರ್‌ ಮೊಹಮ್ಮದ್‌ ಅಜೀಜ್‌ ಮೊಹಮ್ಮದ್‌ (30) ಎಂದು ಗುರುತಿಸಲಾಗಿದೆ. ನಾಗ್ಪುರದ ದಿಘೋರಿ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಈತನ ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿತ್ತು. ಬಳಿಕ, ವಶಕ್ಕೆ ಪಡೆದು ಜೂನ್‌ 23ರಂದು ಗಡಿಪಾರು ಮಾಡಲಾಗಿತ್ತು. ನಂತರ, ಈತ ತಾಲಿಬಾನ್‌ ಸೇರಿದ್ದಾನೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಆರು ತಿಂಗಳ ಪ್ರವಾಸಿ ವೀಸಾ ಆಧಾರದ ಮೇಲೆ ಈತ ನಾಗ್ಪುರಕ್ಕೆ 2010ರಲ್ಲಿ ಬಂದಿದ್ದ. ತನಗೆ ’ನಿರಾಶ್ರಿತ’ ಸ್ಥಾನಮಾನ ನೀಡಬೇಕು ಎಂದು ಕೋರಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು. ಆದರೂ, ಈತ ಕಾನೂನುಬಾಹಿರವಾಗಿ ವಾಸಿಸುತ್ತಿದ್ದ’ ಎಂದು ವಿವರಿಸಿದ್ದಾರೆ.

‘ಈತನ ಮೂಲ ಹೆಸರು ನೂರ್‌ ಮೊಹಮ್ಮದ್‌. ಈತನ ಸಹೋದರನೊಬ್ಬ ತಾಲಿಬಾನ್‌ ಜತೆ ಕಾರ್ಯನಿರ್ವಹಿಸುತ್ತಿದ್ದ. ಈತನ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಪರಿಶೀಲಿಸಿದಾಗ ಕೆಲವು ಭಯೋತ್ಪಾದನೆ ಸಂಘಟನೆಗಳನ್ನು ಅನುಸರಿಸುತ್ತಿದ್ದ ಎನ್ನುವುದು ಗೊತ್ತಾಗಿದೆ. ಈತನ ದೂರವಾಣಿ ಕರೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.