ADVERTISEMENT

ಜಮ್ಮು–ಕಾಶ್ಮೀರದೊಳಗೆ ನುಸುಳಲು ಅಫ್ಗನ್‌ ಉಗ್ರರ ಯತ್ನ ಸಾಧ್ಯತೆ: ಜ.ನರವಣೆ

ಒಳನುಸುಳುವಿಕೆ ಮಟ್ಟಹಾಕಲು ಸೇನಾಪಡೆಗಳು ಸಮರ್ಥ: ಸೇನಾ ಮುಖ್ಯಸ್ಥ ವಿಶ್ವಾಸ

ಪಿಟಿಐ
Published 9 ಅಕ್ಟೋಬರ್ 2021, 11:03 IST
Last Updated 9 ಅಕ್ಟೋಬರ್ 2021, 11:03 IST
ಜನರಲ್‌ ಎಂ.ಎಂ.ನರವಣೆ
ಜನರಲ್‌ ಎಂ.ಎಂ.ನರವಣೆ   

ನವದೆಹಲಿ: ‘ಅಫ್ಗಾನಿಸ್ತಾನ ಸಹಜ ಸ್ಥಿತಿಗೆ ಮರಳಿದ ನಂತರ ಅಫ್ಗನ್‌ ಮೂಲದ ಉಗ್ರರು ಜಮ್ಮು–ಕಾಶ್ಮೀರದೊಳಗೆ ನುಸುಳಲು ಯತ್ನಿಸುವ ಸಾಧ್ಯತೆಗಳಿವೆ’ ಎಂದು ಸೇನಾಪಡೆ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಶನಿವಾರ ಹೇಳಿದರು.

‘ಎರಡು ದಶಕಗಳ ಹಿಂದೆ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ನ ಆಡಳಿತ ಇತ್ತು. ಆಗಲೂ ಇಂಥ ಘಟನೆಗಳು ನಡೆದಿದ್ದವು. ಹೀಗಾಗಿ ಒಳನುಸುಳುವಿಕೆ ಯತ್ನಗಳು ಮತ್ತೆ ಮರುಕಳಿಸುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ’ ಎಂದರು.

‘ಇಂಡಿಯಾ ಟುಡೆ’ ನಿಯತಕಾಲಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇಂಥ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನಾಪಡೆಗಳು ಸನ್ನದ್ಧವಾಗಿವೆ. ಒಳನುಸುಳುವಿಕೆಯನ್ನು ಮಟ್ಟ ಹಾಕುವ ಕಾರ್ಯತಂತ್ರ ಹಾಗೂ ಉಗ್ರರ ಚಟುವಟಿಕೆಗಳ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಭದ್ರತಾಪ‍ಡೆಗಳು ಹೊಂದಿವೆ’ ಎಂದು ಹೇಳಿದರು.

ADVERTISEMENT

‘ಕಾಶ್ಮೀರದಲ್ಲಿ ನಡೆಯುತ್ತಿರುವ ನಾಗರಿಕರ ಹತ್ಯೆಗಳಿಗೂ, ಅಫ್ಗಾನಿಸ್ತಾನ ತಾಲಿಬಾನಿಗಳ ವಶವಾಗಿರುವುದಕ್ಕೂ ಸಂಬಂಧ ಇದೆಯೇ’ ಎಂಬ ಪ್ರಶ್ನೆಗೆ, ‘ಈ ಎರಡು ವಿದ್ಯಮಾನಗಳಿಗೆ ಸಂಬಂಧ ಇದೆ ಎಂಬುದಾಗಿ ಹೇಳಲಾಗದು’ ಎಂದು ಜನರಲ್‌ ನರವಣೆ ಉತ್ತರಿಸಿದರು.

‘ಪಾಕಿಸ್ತಾನದ ಮೂಲಕ ಅಫ್ಗನ್‌ ಮೂಲದ ಉಗ್ರರು ಜಮ್ಮು–ಕಾಶ್ಮೀರವನ್ನು ಪ್ರವೇಶಿಸುವ ಸಾಧ್ಯತೆಗಳೂ ಇವೆ. ಇದರಿಂದ ಲಷ್ಕರ್‌–ಎ–ತಯಬಾ, ಜೈಷ್‌–ಎ–ಮೊಹಮ್ಮದ್‌ನಂತಹ ಸಂಘಟನೆಗಳಿಂದ ಭಯೋತ್ಪಾದನಾ ಕೃತ್ಯಗಳು ಹೆಚ್ಚಾಗಬಹುದು. ಇದು ನಿಜಕ್ಕೂ ಕಳವಳಕಾರಿ ಹಾಗೂ ಖಂಡನೀಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.