ನವದೆಹಲಿ: ಹಲವು ಖಗೋಳ ವಿದ್ಯಮಾನಗಳಿಂದಾಗಿ ಹೊರಹೊಮ್ಮುವ ಅತಿ ದುರ್ಬಲ ಗುರುತ್ವಾಕರ್ಷಣೆ ತರಂಗಗಳನ್ನು ಪತ್ತೆ ಮಾಡುವ ಉದ್ದೇಶದ, ಅತ್ಯಾಧುನಿಕ ವೀಕ್ಷಣಾಲಯ ಸ್ಥಾಪಿಸುವ ಕಾರ್ಯಕ್ಕೆ ಕೊನೆಗೂ ಚಾಲನೆ ಸಿಕ್ಕಿದೆ.
‘ಲೇಸರ್ ಇಂಟರ್‌ಫೆರೋಮೀಟರ್ ಗ್ರ್ಯಾವಿಟೇಶನಲ್ ವೇವ್ ಆಬ್ಸರ್ವೇಟರಿ’(ಎಲ್‌ಐಜಿಒ) ಎಂದು ಕರೆಯಲಾಗುವ ಈ ವೀಕ್ಷಣಾಲಯವನ್ನು ₹1,600 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಔಂಧಾ ಬಳಿ ಮುಂದಿನ ನಾಲ್ಕು ವರ್ಷಗಳಲ್ಲಿ ಈ ಸುಸಜ್ಜಿತ ವೀಕ್ಷಣಾಲಯ ತಲೆ ಎತ್ತಲಿದೆ ಎಂದು ಅಣುಶಕ್ತಿ ಇಲಾಖೆಯ ದಾಖಲೆಗಳು ಹೇಳುತ್ತವೆ.
ಕಪ್ಪುರಂಧ್ರಗಳು ಹಾಗೂ ನ್ಯೂಟ್ರಾನ್ ತಾರೆಗಳು ವಿಲೀನದಂತಹ ಖಗೋಳ ವಿದ್ಯಮಾನಗಳ ವೇಳೆ ಬಹಳ ದುರ್ಬಲವಾದ ತರಂಗಗಳು ಉತ್ಪತ್ತಿಯಾಗುತ್ತವೆ. ಇವುಗಳ ಪತ್ತೆ ಹಾಗೂ ಅಧ್ಯಯನವು ಬ್ರಹ್ಮಾಂಡ ಕುರಿತ ಹೊಸ ಹೊಳಹುಗಳನ್ನು ನೀಡಲಿದೆ.
‘ಔಂಧಾ ಪ್ರದೇಶದಲ್ಲಿ ಭೂಕಂಪನ ಸಂಭವಿಸುವುದು ಬಹಳ ಅಪರೂಪ. ಅಲ್ಲದೇ, ಕಂಪನ ತೀವ್ರತೆ ಕೂಡ ಅತ್ಯಂತ ಕಡಿಮೆ ಇರುತ್ತದೆ. ಈ ಪ್ರದೇಶದಲ್ಲಿ ಕಡಿಮೆ ಮಳೆ ಬೀಳುತ್ತದೆ ಹಾಗೂ ಗಾಳಿಯ ವೇಗವೂ ಅಧಿಕ ಇರುವುದಿಲ್ಲ. ಈ ಎಲ್ಲ ಅಂಶಗಳು, ಸೂಕ್ಷ್ಮವಾದ ಗುರುತ್ವಾಕರ್ಷಣೆ ತರಂಗಗಳ ಪತ್ತೆಗೆ ಅನುಕೂಲಕರ ಪರಿಸರ ಒದಗಿಸುತ್ತವೆ. ಹೀಗಾಗಿ, ವೀಕ್ಷಣಾಲಯ ಸ್ಥಾಪನೆಗೆ ಔಂಧಾ ಪ್ರದೇಶವನ್ನೇ ಆಯ್ಕೆ ಮಾಡಲಾಗಿದೆ’ ಎಂದು ಪುಣೆಯ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರಾನಮಿ ಅಂಡ್ ಆಸ್ಟ್ರೊಫಿಜಿಕ್ಸ್‌ನ ಹಿರಿಯ ವಿಜ್ಞಾನಿ ಸಂಜಿತ್ ಮಿತ್ರ ಹೇಳಿದ್ದಾರೆ.
ಅಮೆರಿಕದ ಹ್ಯಾನ್‌ಫೋರ್ಡ್ ಹಾಗೂ ಲಿವಿಂಗ್‌ಸ್ಟನ್‌ನಲ್ಲಿ ಇಂತಹ ವೀಕ್ಷಣಾಲಯಗಳು ಇವೆ. ಔಂಧಾದಲ್ಲಿ ನಿರ್ಮಿಸಲಾಗುವ ವೀಕ್ಷಣಾಲಯವು ಈ ಸರಣಿಯಲ್ಲಿನ ಮೂರನೇ ಸೌಲಭ್ಯವಾಗಿದೆ.
ಖಭೌತ ವಿಜ್ಞಾನಿಗಳ ಬಹುದಿನಗಳ ಬೇಡಿಕೆ
ಗುರುತ್ವಾಕರ್ಷಣೆ ತರಂಗ ವೀಕ್ಷಣಾಲಯ ಸ್ಥಾಪನೆಯು ಭಾರತದ ಖಭೌತವಿಜ್ಞಾನಿಗಳ ಬಹುದಿನಗಳ ಬೇಡಿಕೆಯಾಗಿತ್ತು. ‘ಎಲ್‌ಐಜಿಒ–ಇಂಡಿಯಾ’ ಪ್ರಾಜೆಕ್ಟ್ ಕುರಿತು ಯೋಜನಾ ಅಯೋಗವು 2011ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಅಮೆರಿಕದ ರಾಷ್ಟ್ರೀಯ ವಿಜ್ಞಾನ ಮಂಡಳಿಯು ತನ್ನ ಒಂದು ವೀಕ್ಷಣಾಲಯವನ್ನು ಭಾರತಕ್ಕೆ ಸ್ಥಳಾಂತರಿಸಲು 2012ರಲ್ಲಿ ಒಪ್ಪಿಗೆ ನೀಡಿತ್ತು. ಈ ವೀಕ್ಷಣಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರ 2016ರಲ್ಲಿ ತಾತ್ವಿಕ ಒಪ್ಪಿಗೆ ನೀಡಿತ್ತು. 2023ರ ಏಪ್ರಿಲ್‌ನಲ್ಲಿ ಕೇಂದ್ರ ಸಚಿವ ಸಂಪುಟ ₹2600 ಕೋಟಿ ವೆಚ್ಚದ ಈ ಪ್ರಾಜೆಕ್ಟ್‌ಗೆ ಒಪ್ಪಿಗೆ ನೀಡಿತು. ಇದಾದ ತಿಂಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಣಾಲಯ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ₹1600 ಕೋಟಿ ವೆಚ್ಚದಲ್ಲಿ ವೀಕ್ಷಣಾಲಯ ಸ್ಥಾಪಿಸಲಾಗುತ್ತಿದ್ದರೆ ಈ ವ್ಯವಸ್ಥೆಗೆ ಬೇಕಾದ ಸಂವೇದಕಗಳು ಹಾಗೂ ಇತರ ಸಾಧನಗಳ ಖರೀದಿಗೆ ₹1000 ಕೋಟಿ ತೆಗೆದಿರಿಸಲಾಗುತ್ತದೆ. ಇಂತಹ ವೀಕ್ಷಣಾಲಯಗಳು ಯುರೋಪ್ ಮತ್ತು ಜಪಾನ್‌ನಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.