ADVERTISEMENT

ಜಮ್ಮು | ಗುಂಡಿನ ದಾಳಿ: ಉಗ್ರರಿಗಾಗಿ ಮುಂದುವರಿದ ಶೋಧ

ಪಿಟಿಐ
Published 27 ಫೆಬ್ರುವರಿ 2025, 13:30 IST
Last Updated 27 ಫೆಬ್ರುವರಿ 2025, 13:30 IST
   

ಜಮ್ಮು: ಸೇನಾ ವಾಹನದ ಮೇಲೆ ಬುಧವಾರ ಗುಂಡಿನ ದಾಳಿ ನಡೆಸಿದ್ದ ಉಗ್ರರಿಗಾಗಿ ರಾಜೌರಿ ಜಿಲ್ಲೆಯ ಸುಂದರ್‌ಬನಿ ವಲಯದಲ್ಲಿ, ಗಡಿ ನಿಯಂತ್ರಣ ರೇಖೆಗೆ (ಎಲ್ಒಸಿ) ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಭದ್ರತಾ ಸಿಬ್ಬಂದಿ ತೀವ್ರ ಶೋಧ ಮುಂದುವರಿಸಿದ್ದಾರೆ.

ಎಲ್‌ಒಸಿಗೆ ಹೊಂದಿಕೊಂಡಿರುವ ವಿವಿಧ ಪ್ರದೇಶಗಳನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದಾರೆ. ಕಠುವಾ ಜಿಲ್ಲೆಯ ಹಿರಾನಗರ ವಲಯದ ವಿವಿಧೆಡೆಯೂ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬುಧವಾರ ಸುಂದರ್‌ಬನಿ ವಲಯದ ಫಲ್‌ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸೇನೆಯ ವಾಹನ ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಆಧುನಿಕ ತಂತ್ರಜ್ಞಾನ, ಡ್ರೋನ್‌ ಮತ್ತು ಶ್ವಾನದಳದ ಸೇವೆ ಬಳಸಿ ಶೋಧ ನಡೆದಿದೆ. ಯಾವುದೆ ಸುಳಿವು ಸಿಕ್ಕಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ಎಕ್ಸ್‌’ನಲ್ಲಿ ಈ ಕುರಿತಂತೆ ಅಭಿಪ್ರಾಯವನ್ನು ಹಂಚಿಕೊಂಡಿರುವ ಸೇನೆಯ ‘ವೈಟ್ ನೈಟ್‌ ಕಾರ್ಪ್ಸ್‌’ ಪಡೆಯು, ’ಗುಂಡಿನ ದಾಳಿಯಲ್ಲಿ ಸೇನಾ ಸಿಬ್ಬಂದಿಗೂ ಪೆಟ್ಟಾಗಿದೆ ಎಂದು ಕೆಲ ಜಾಲತಾಣಗಳಲ್ಲಿ ವದಂತಿ ಹಬ್ಬಿದೆ. ಇದು, ಆಧಾರರಹಿತ’ ಎಂದು ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.