ನವದೆಹಲಿ: ಹೆಚ್ಚಿನ ಕೊಬ್ಬಿನಾಂಶ ಆಹಾರ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶಾಲಾ ಆವರಣದಲ್ಲಿ ‘ಖಾದ್ಯ ತೈಲ ಫಲಕ’ಗಳನ್ನು ಅಳವಡಿಸಬೇಕು ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಎಲ್ಲ ಶಾಲೆಗಳಿಗೆ ನಿರ್ದೇಶನ ನೀಡಿದೆ.
ಆರೋಗ್ಯಕರ ಆಹಾರ ಪದ್ಧತಿ ಉತ್ತೇಜಿಸಲು ಸಿಬಿಎಸ್‌ಇ ಈ ಸೂಚನೆ ನೀಡಿದೆ.
ಮಕ್ಕಳು ಸಕ್ಕರೆ ತಿನ್ನುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎರಡು ತಿಂಗಳ ಹಿಂದೆಯೇ ಶಾಲೆಗಳಲ್ಲಿ ‘ಸಕ್ಕರೆ ಫಲಕ’ ಅಳವಡಿಸುವಂತೆ ಸೂಚನೆ ನೀಡಿದ ಬೆನ್ನಲ್ಲೇ, ಈ ನಿರ್ದೇಶನ ನೀಡಿದೆ.
‘ಶಾಲೆಯ ಆವರಣದಲ್ಲಿರುವ ಕೆಫೆಟೆರಿಯಾ, ವಿಶ್ರಾಂತಿ ಕೊಠಡಿ, ಸಭೆ ನಡೆಸುವ ಕೊಠಡಿಗಳಲ್ಲಿ ‘ಖಾದ್ಯ ತೈಲ ಫಲಕ’ ಅಥವಾ ‘ಡಿಜಿಟಲ್ ಫಲಕ’ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಇದರಿಂದ ಹೆಚ್ಚಿನ ಕೊಬ್ಬಿನಾಂಶ ಹೊಂದಿದ ಆಹಾರ ಪದಾರ್ಥಗಳ ಸೇವನೆಯಿಂದ ಉಂಟಾಗುವ ಹಾನಿಯ ಕುರಿತು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ನೆರವಾಗಲಿದೆ’ ಎಂದು ತಿಳಿಸಿದ್ದಾರೆ.
‘2019–21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್–5) ಅಂಕಿ ಅಂಶಗಳ ಪ್ರಕಾರ, ವಯಸ್ಕರು ಹಾಗೂ ಮಕ್ಕಳಲ್ಲಿ ಸ್ಥೂಲಕಾಯವು ತೀವ್ರವಾಗಿ ಏರಿಕೆಯಾಗಿದೆ. ನಗರದ ಐದು ಮಂದಿ ವಯಸ್ಕರ ಪೈಕಿ ಒಬ್ಬರು ಅತಿಯಾದ ತೂಕ ಅಥವಾ ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದಾರೆ’ ಎಂದು ಸಿಬಿಎಸ್‌ಇ ನಿರ್ದೇಶಕ (ಶೈಕ್ಷಣಿಕ) ಪ್ರಗ್ಯಾ ಎಂ.ಸಿಂಗ್ ತಿಳಿಸಿದ್ದಾರೆ.
‘ಕಳಪೆ ಆಹಾರ ಪದ್ಧತಿ ಹಾಗೂ ದೈಹಿಕ ಚಟುವಟಿಕೆಗಳಲ್ಲಿ ತೀವ್ರವಾಗಿ ಕುಸಿತ ದಾಖಲಿಸಿರುವುದು ಕೂಡ ಬಾಲ್ಯದಲ್ಲಿಯೇ ಸ್ಥೂಲಕಾಯ ಹೆಚ್ಚಲು ಪ್ರಮುಖ ಕಾರಣವಾಗಿದೆ’ ಎಂದು ಹೇಳಿದ್ದಾರೆ.
ಅಧಿಕೃತ ಲೇಖನ ಸಾಮಗ್ರಿಗಳಾದ ಲೆಟರ್‌ಹೆಡ್, ಲಕೋಟೆ, ನೋಟ್‌ಪ್ಯಾಡ್‌ಗಳಲ್ಲಿ ಆರೋಗ್ಯ ಸಂಬಂಧಿ ಸಂದೇಶಗಳು ಹಾಗೂ ಸ್ಥೂಲಕಾಯರ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಗುಣಮಟ್ಟದ ಆಹಾರ ಸೇವನೆಯ ಶಿಫಾರಸುಗಳನ್ನು ಮಾಡಬೇಕು ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.