ADVERTISEMENT

ಕೃತಕ ಬುದ್ಧಿಮತ್ತೆಯನ್ನು ಬೆದರಿಕೆಯನ್ನಾಗಿ ಪರಿಗಣಿಸದಿರಿ: ನ್ಯಾ. ಹಿಮಾ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 12:24 IST
Last Updated 12 ಫೆಬ್ರುವರಿ 2023, 12:24 IST
ನ್ಯಾ. ಹಿಮಾ ಕೊಹ್ಲಿ
ನ್ಯಾ. ಹಿಮಾ ಕೊಹ್ಲಿ   

ನವದೆಹಲಿ: ‘ಕೃತಕ ಬುದ್ಧಿಮತ್ತೆಯನ್ನು (ಎಐ) ಬೆದರಿಕೆಯನ್ನಾಗಿ ನೋಡದೆ, ನ್ಯಾಯಾಂಗ ಕ್ಷೇತ್ರದಲ್ಲಿ ಕಾನೂನಿನ ಗುಣಮಟ್ಟವನ್ನು ಹೆಚ್ಚಿಸುವ ಅವಕಾಶವನ್ನಾಗಿ ಪರಿಗಣಿಸಬೇಕು’ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದ್ದಾರೆ.

ಐಸಿಐಸಿಐ ಬ್ಯಾಂಕ್ ಶನಿವಾರ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಹಾಗೂ ಕಾನೂನು ವಲಯ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದಾಗಿ ತಮ್ಮ ಪರಿಣತಿ ಮತ್ತು ಕೌಶಲವು ಕೆಲಸಕ್ಕೆ ಬರುವುದಿಲ್ಲ ಎಂದು ವಕೀಲರು ಆತಂಕ ಪಡಬಹುದು. ಆದರೆ, ಎಐ ಅನ್ನು ಬೆದರಿಕೆಯನ್ನಾಗಿ ಪರಿಗಣಿಸದೇ ಕಾನೂನಿನ ಗುಣಮಟ್ಟವನ್ನು ಹೆಚ್ಚಿಸುವ ಅವಕಾಶವನ್ನಾಗಿ ಪರಿಗಣಿಸಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್‌–19 ಸಾಂಕ್ರಾಮಿಕವು ಉತ್ತುಂಗದ ಸ್ಥಿತಿಯಲ್ಲಿದ್ದಾಗ, ನ್ಯಾಯಾಂಗ ಕ್ಷೇತ್ರದಲ್ಲಿ ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸಿದೆ ಎಂಬುದನ್ನು ನಿರಾಕರಿಸಲಾಗದು. ತಂತ್ರಜ್ಞಾನದ ಮೇಲೆ ಅವಲಂಬಿತವಾಗಿ ನ್ಯಾಯಾಲಯಗಳಲ್ಲಿ ಎಐ ಅನ್ನು ಬಳಸುವಾಗ ಅದರೊಂದಿಗೆ ನೈತಿಕ ಕಾಳಜಿಯ ಬಗ್ಗೆ ಅರಿಯುವುದೂ ಅತ್ಯಗತ್ಯ. ಎಐನ ಬಳಕೆಯ ಸಂದರ್ಭದಲ್ಲಿ ಜವಾಬ್ದಾರಿ, ಪಾರದರ್ಶಕತೆ ಹಾಗೂ ರಕ್ಷಣೆಯ ಹಕ್ಕುಗಳ ಪ್ರಶ್ನೆಯನ್ನೂ ಎದುರಿಸಬೇಕಾಗುತ್ತದೆ. ಹಾಗಾಗಿ, ಎಲ್ಲರಿಗು ಸಮಾನ ನ್ಯಾಯ ದೊರಕಿಸುವುದನ್ನು ಖಚಿತಪಡಿಸಿಕೊಳ್ಳಲು ಸ್ಪಷ್ಟ ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರಗಳನ್ನು ರೂಪಿಸುವುದು ಕ್ಲಿಷ್ಟಕರವಾಗಬಹುದು’ ಎಂದೂ ಅವರು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.