ADVERTISEMENT

2026ರ ಚುನಾವಣೆಗೂ ಮುನ್ನ ಎಐಎಡಿಎಂಕೆ ಒಗ್ಗೂಡಬೇಕು: ಶಶಿಕಲಾ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 14:21 IST
Last Updated 15 ಸೆಪ್ಟೆಂಬರ್ 2025, 14:21 IST
   

ಚೆನ್ನೈ: ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದೊರೈ ಅವರ ಜನ್ಮ ದಿನಾಚರಣೆಯಂದು ಎಐಎಡಿಎಂಕೆ ಬಣಗಳ ನಾಯಕರು ವಿಲೀನಕ್ಕೆ ಧ್ವನಿ ಎತ್ತಿದ್ದಾರೆ.

ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಎಐಎಡಿಎಂಕೆ ಬಣಗಳ ವಿಲೀನಕ್ಕೆ ಎಐಎಡಿಎಂಕೆಯ ಪದಚ್ಯುತ ಮಧ್ಯಂತರ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಮನವಿ ಮಾಡಿದ್ದಾರೆ.

ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನ ಎಐಎಡಿಎಂಕೆಯನ್ನು ನೋಡಲು ಬಯಸುತ್ತಾರೆ. ಪಕ್ಷದ ಚುನಾವಣಾ ನಿರೀಕ್ಷೆಗಳು ಅದರ ವಿಲೀನದ ಮೇಲೆ ಅವಲಂಬಿತವಾಗಿದೆ ಎಂದು ಅವರು ಪುನರುಚ್ಚರಿಸಿದರು.

ADVERTISEMENT

2026ರ ವಿಧಾನಸಭೆ ಚುನಾವಣೆಗೂ ಮುನ್ನ ಎಐಎಡಿಎಂಕೆಯ ವಿವಿಧ ಬಣಗಳು ಒಂದುಗೂಡಬೇಕೆಂಬುದು ಎಲ್ಲರ ಬಯಕೆಯಾಗಿದೆ. ನನಗೂ ಅದು ಆಗಬೇಕು ಎನಿಸುತ್ತದೆ ಎಂದು ಶಶಿಕಲಾ ಪತ್ರಕರ್ತರಿಗೆ ತಿಳಿಸಿದ್ದಾರೆ.

ವಿಲೀನ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಶಿಕಲಾ, ತಿರಸ್ಕರಿಸುವುದು ಅತ್ಯಂತ ಸುಲಭದ ಕೆಲಸ. ಆದರೆ, ಎಲ್ಲರನ್ನೂ ಒಗ್ಗೂಡಿಸುವುದು ಕಷ್ಟದ ಕೆಲಸ. ಅದಕ್ಕೆ ಸ್ವಲ್ಪ ಸಮಯವಾಗುತ್ತದೆ ಎಂದಿದ್ದಾರೆ.

ಡಿಎಂಕೆ ಆಡಳಿತ ಅಂತ್ಯಗೊಳಿಸುವುದು ಮತ್ತು ಅಮ್ಮ(ಜಯಲಲಿತಾ) ಮಾದರಿ ಆಡಳಿತವನ್ನು ಮರುಸ್ಥಾಪಿಸುವುದು ಎಐಎಡಿಎಂಕೆ ಗುರಿಯಾಗಿದೆ. ನನ್ನ ಕೆಲಸ ಪಕ್ಷದ ಒಗ್ಗೂಡುವಿಕೆ ಮತ್ತು ಗೆಲುವು ಸಾಧಿಸುವತ್ತ ಆಗಿರುತ್ತದೆ ಎಂದಿದ್ದಾರೆ.

ಹಿಂದೆ ಆಗಿದ್ದಾಯ್ತು.. ಮುಂದೆ ಒಳ್ಳೆಯ ಉದ್ದೇಶದೊಂದಿಗೆ ಮುನ್ನಡೆಯೋಣ ಎಂದು ಅಣ್ಣಾದೊರೈ ಚಿತ್ರವಿರುವ ಪಕ್ಷದ ಧ್ವಜವನ್ನು ಹಿಡಿದು ಶಶಿಕಲಾ ಹೇಳಿದರು.

ಎಐಎಡಿಎಂಕೆ ಹಿರಿಯ ನಾಯಕ ಕೆ.ಎ. ಸೆಂಗೋಟ್ಟೈಯನ್ ಸಹ ಇದೇ ಮಾತುಗಳನ್ನಾಡಿದ್ದು, ಇಂದು ನನಗೆ ಅಣ್ಣಾದೊರೈಅವರ ಬಂಗಾರದ ಮಾತು ನೆನಪಾಗುತ್ತಿದೆ. ಅದೇನೆಂದರೆ, ನಾವು ಪರಸ್ಪರ ಆಗಿರುವುದನ್ನು ಮರೆತು ಕ್ಷಮಿಸೋಣ. ನಾವು ಮುಂದುವರಿಯಬೇಕಾದ ಮಾರ್ಗ ಅದು ಎಂದಿದ್ದಾರೆ.

‘ಎಐಎಡಿಎಂಕೆ ಬಲಗೊಳ್ಳಲು ಒಗ್ಗೂಡಬೇಕು ಎಂಬ ನನ್ನ ಅಭಿಪ್ರಾಯವನ್ನು ಸೆಪ್ಟೆಂಬರ್ 5ರಂದು ಈರೋಡ್‌ನಲ್ಲಿ ವರದಿಗಾರರಿಗೆ ತಿಳಿಸಿದ್ದೇನೆ’ ಎಂದು ಸೆಂಗೋಟ್ಟೈಯನ್ ಹೇಳಿದರು. ಪಕ್ಷದ ನಾಯಕರಾದ ಎಂಜಿಆರ್ ಮತ್ತು ಜಯಲಲಿತಾ ಅವರ ಕನಸನ್ನು ನನಸಾಗಿಸುವ ಅಗತ್ಯತೆಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದೇನೆ ಎಂದರು.

ಈ ಮಧ್ಯೆ, ಅಮ್ಮ ಮಕ್ಕಳ್ ಮುನ್ನೇತ್ರ ಕಾಳಗಂ ಪ್ರಧಾನ ಕಾರ್ಯದರ್ಶಿ, ಎಐಎಡಿಎಂಕೆಯ ಉಚ್ಚಾಟಿತ ನಾಯಕ ಟಿಟಿವಿ ದಿನಕರನ್, 2026ರ ಚುನಾವಣೆಯಲ್ಲಿ ಪಳನಿಸ್ವಾಮಿಯನ್ನು ಮುಖ್ಯಮಂತ್ರಿ ಎಂದು ಜನ ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.