ADVERTISEMENT

ತಳಕಿತ್ತುಹೋದ ವಿಮಾನದಲ್ಲೇ 4 ಗಂಟೆ ಪ್ರಯಾಣ: ತಪ್ಪಿದ ಭಾರಿ ಅವಘಡ

ಎಲ್ಲ ಪ್ರಯಾಣಿಕರೂ ಸುರಕ್ಷಿತ

ಏಜೆನ್ಸೀಸ್
Published 13 ಅಕ್ಟೋಬರ್ 2018, 1:21 IST
Last Updated 13 ಅಕ್ಟೋಬರ್ 2018, 1:21 IST
ವಿಮಾನದ ತಳಭಾಗ ಕಿತ್ತುಹೋಗಿದೆ
ವಿಮಾನದ ತಳಭಾಗ ಕಿತ್ತುಹೋಗಿದೆ   

ತಿರುಚನಾಪಳ್ಳಿ: ಟೇಕ್ ಆಫ್ ಆಗುವ ವೇಳೆ ತಿರುಚನಾಪಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ತಡೆಗೋಡೆಗೆ ತಗುಲಿ, ತಳಕಿತ್ತುಹೋಗಿದ್ದರೂ ಏರ್‌ ಇಂಡಿಯಾ ವಿಮಾನವೊಂದು ನಾಲ್ಕು ಗಂಟೆ ಹಾರಾಟ ನಡೆಸಿದೆ. ಸಿಬ್ಬಂದಿ ಸೇರಿ 136 ಜನರಿದ್ದ ವಿಮಾನವು ಭಾರಿ ಅವಘಡದಿಂದ ಪಾರಾಗಿದೆ.

ಗುರುವಾರ ಮಧ್ಯರಾತ್ರಿ 1.30ರಲ್ಲಿ ವಿಮಾನವು ತಿರುಚನಾಪಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರಯಾಣ ಆರಂಭಿಸಿತ್ತು. ಟೇಕ್‌ ಅಫ್ ಆಗುವ ವೇಳೆ ವಿಮಾನದ ದೇಹದ ತಳಭಾಗ ಗೋಡೆಗೆ ತಗುಲಿದ್ದನ್ನು ವಾಯು ಸಂಚಾರ ನಿಯಂತ್ರಕರು (ಎಟಿಸಿ) ಗಮನಿಸಿದ್ದಾರೆ.

ತಕ್ಷಣೇ ಅವರು ವಿಮಾನದ ಪೈಲಟ್‌ಗಳನ್ನು ಸಂಪರ್ಕಿಸಿ, ಅವಘಡದ ಬಗ್ಗೆ ಗಮನ ಸೆಳೆದಿದ್ದಾರೆ. ಆದರೆ ‘ವಿಮಾನದ ಎಲ್ಲಾ ಪರಿಕರಗಳು ಸರಿಯಾಗಿ ಕೆಲಸ ಮಾಡುತ್ತಿವೆ’ ಎಂದು ವಿಮಾನದ ಪೈಲಟ್‌ಗಳು ಉತ್ತರಿಸಿದ್ದಾರೆ. ನಂತರ ಹಾರಾಟ ಮುಂದುವರೆಸಿದ್ದಾರೆ.

ADVERTISEMENT

ಎಟಿಸಿ ಸಿಬ್ಬಂದಿ ಘಟನೆ ಬಗ್ಗೆ ವಿಮಾನ ನಿಲ್ದಾಣದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿಯು ನಿಲ್ದಾಣದ ಗೋಡೆಯನ್ನು ಪರಿಶೀಲಿಸಿದಾಗ, ಅದು ಬಿದ್ದುಹೋಗಿರುವುದು ತಿಳಿದಿದೆ. ಜತೆಗೆ ವಿಮಾನದ ಕೆಲವು ಭಾಗಗಳೂ ಅಲ್ಲಿ ಬಿದ್ದಿರುವುದು ಗೊತ್ತಾಗಿದೆ.ವಿಮಾನವನ್ನು ಮುಂಬೈನಲ್ಲಿ ಇಳಿಸಿ ಎಂದು ತಕ್ಷಣವೇ ಪೈಲಟ್‌ಗಳಿಗೆ ಸೂಚಿಸಲಾಗಿದೆ.

ಬೆಳಿಗ್ಗೆ 5.30ರ ಸುಮಾರಿನಲ್ಲಿ ವಿಮಾನವು ಮುಂಬೈಗೆ ಬಂದಿಳಿದಿದೆ. ಅಲ್ಲಿ ಪರೀಕ್ಷಿಸಿದಾಗ, ವಿಮಾನದ ತಳಭಾಗಕ್ಕೆ ಭಾರಿ ಹಾನಿಯಾಗಿರುವುದು ಪತ್ತೆಯಾಗಿದೆ. ವಿಮಾನದತಳಭಾಗದ ಕವಚವು ಹಲವು ಅಡಿಗಳಷ್ಟು ಕಿತ್ತುಹೋಗಿರುವುದು ಮತ್ತು ಎಂಜಿನ್‌ ಕವಚಕ್ಕೂ ಹಾನಿಯಾಗಿರುವುದು ಪತ್ತೆಯಾಗಿದೆ.ನಂತರ ಬೇರೊಂದು ವಿಮಾನದಲ್ಲಿ ಪ್ರಯಾಣಿಕರನ್ನು ದುಬೈಗೆ ಕಳುಹಿಸಲಾಗಿದೆ.

ಜಖಂ ಆದ ವಿಮಾನದ ಚಿತ್ರಗಳನ್ನು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವು ಈಗ ವೈರಲ್ ಆಗಿವೆ.

ಏರ್‌ ಇಂಡಿಯಾವು ವಿಮಾನದ ಇಬ್ಬರು ಪೈಲಟ್‌ಗಳನ್ನೂ ಅಮಾನತು ಮಾಡಿದ್ದು, ಆಂತರಿಕ ತನಿಖೆಗೆ ಆದೇಶಿಸಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವೂ ತನಿಖೆಗೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.