ADVERTISEMENT

ವಾಯುಮಾಲಿನ್ಯ: ಪಂಚತಾರಾ ಹೋಟೆಲ್‌ನಲ್ಲಿ ಕುಳಿತು ರೈತರ ದೂಷಣೆ- 'ಸುಪ್ರೀಂ' ತರಾಟೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 22:51 IST
Last Updated 17 ನವೆಂಬರ್ 2021, 22:51 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ದೆಹಲಿಯಲ್ಲಿನ ವಾಯುಮಾಲಿನ್ಯವನ್ನು ನಿಯಂತ್ರಿಸಲು ತಕ್ಕ ಕ್ರಮಗಳನ್ನು ಕೈಗೊಳ್ಳುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌, ಇದು ಪ್ರತಿವರ್ಷದ ಸಮಸ್ಯೆಯಾಗಿದ್ದರೂ ಈ ಬಗ್ಗೆ ಅಧಿಕಾರಶಾಹಿ ಜಡವಾಗಿದೆ ಎಂದು ಹೇಳಿದೆ.

‘ದೆಹಲಿಯ ಪಂಚತಾರಾ ಹೋಟೆಲ್‌ ಗಳಲ್ಲಿ ಕುಳಿತವರು ರೈತರನ್ನು ದೂಷಿಸುತ್ತಿದ್ದಾರೆ. ಈ ಸಮಸ್ಯೆಗೆ ರೈತರ ಕಡೆಗೆ ಬೆರಳು ತೋರಿಸುವುದನ್ನು ಬಿಟ್ಟು, ಇದಕ್ಕೆ ವೈಜ್ಞಾನಿಕವಾದ ಪರ್ಯಾಯ ಮಾರ್ಗವಿದ್ದಲ್ಲಿ ಆ ಬಗ್ಗೆ ಪರಿಶೀಲಿಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ನ್ಯಾಯಪೀಠ ಹೇಳಿತು.

‘ಚಳಿಗಾಲದ ಸಂದರ್ಭದಲ್ಲಿ ರೈತರು ಕೂಳೆ (ಜಮೀನಿನಲ್ಲಿ ಉಳಿವ ಕೃಷಿ ತ್ಯಾಜ್ಯ) ಸುಡುತ್ತಿರುವುದರಿಂದ ಹೆಚ್ಚಿನ ವಾಯುಮಾಲಿನ್ಯ ಆಗುತ್ತಿದೆ’ ಎಂದು ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.

ADVERTISEMENT

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಹಾಗೂ ಸೂರ್ಯಕಾಂತ ಅವರೂ ಇದ್ದ ನ್ಯಾಯಪೀಠವು ಈ ವಾದವನ್ನು ಒಪ್ಪಲಿಲ್ಲ. ‘ಯಾರೊಬ್ಬರಿಗೂ ರೈತರ ಪರಿಸ್ಥಿತಿ ಅರ್ಥವಾಗುತ್ತಿಲ್ಲ. ಕೂಳೆಯನ್ನು ಸುಡುವುದು ಅವರಿಗೆ ಅನಿವಾರ್ಯವಾಗಿರುವುದಕ್ಕೆ ಕಾರಣವೇನು ಎಂಬುದು ತಿಳಿಯುತ್ತಿಲ್ಲ. ಆದರೆ, ಕೈಗಾರಿಕೆಗಳು, ನಿರ್ಮಾಣ ಕಾಮಗಾರಿಗಳಿಂದ ಆಗುತ್ತಿರುವ ಮಾಲಿನ್ಯವನ್ನು ತಡೆಯಲು ಇಡೀ ವರ್ಷ ಯಾಕೆ ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ’ ಎಂದು ಕೇಳಿತು.

ಮಾಲಿನ್ಯದ ಕಾರಣಗಳ ಕುರಿತು ನಡೆದ ವಿವಿಧ ಅಧ್ಯಯನಗಳಲ್ಲಿನ ನ್ಯೂನತೆಗಳನ್ನು ನ್ಯಾಯಪೀಠವು ಎತ್ತಿ ತೋರಿಸಿತು. ‘ಐಐಟಿ ಕಾನ್ಪುರ ನಡೆಸಿದ ಅಧ್ಯಯನದ ಪ್ರಕಾರ, ಕೂಳೆ ಹಾಗೂ ಪಟಾಕಿ ಸುಡುವುದು ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಲ್ಲ. ಇದನ್ನು ನಂಬಬಹುದೇ’ ಎಂದು ಪ್ರಶ್ನಿಸಿತು.

ಮಾಲಿನ್ಯದ ಸಮಸ್ಯೆಯನ್ನು ಬಗೆಹರಿಸಲು ಅಧಿಕಾರಶಾಹಿ ಕೂಡ ಅಗತ್ಯವಾದ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಕೋರ್ಟ್‌ ಛೀಮಾರಿ ಹಾಕಿತು. ‘ನಿಷ್ಕ್ರಿಯತೆ, ಜಡತ್ವ, ಉದಾಸೀನವನ್ನು ಬೆಳೆಸಿಕೊಂಡಿರುವ ಅಧಿಕಾರಿಗಳು, ಎಲ್ಲವನ್ನೂ ನ್ಯಾಯಾಲ
ಯವೇ ಹೇಳಬೇಕೆಂಬ ಮನಸ್ಥಿತಿಗೆ ಬಂದು ಮುಟ್ಟಿದ್ದಾರೆ. ಸ್ಪ್ರಿಂಕ್ಲರ್‌ಗಳನ್ನು ಹೇಗೆ ಬಳಸಬೇಕು, ವಾಹನಗಳನ್ನು ಹೇಗೆ ನಿಲ್ಲಿಸ
ಬೇಕು ಎಂಬ ಬಗ್ಗೆಯೂ ಅವರು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಮುಂದಾಗುವುದಿಲ್ಲ’ ಎಂದಿತು.

‘ಸರ್ಕಾರದ ವರದಿ ಪ್ರಕಾರ, ವಾಹನಗಳೇ ಮಾಲಿನ್ಯಕ್ಕೆ ಪ್ರಮುಖ ಕಾರಣ. ಆದರೂ, ದೆಹಲಿಯ ರಸ್ತೆಗಳಲ್ಲಿ ಅತಿ ಹೆಚ್ಚು ಇಂಧನ ಕುಡಿಯುವ ವಾಹನಗಳು, ಹೆಚ್ಚು ಶಬ್ದ ಮಾಡುವ ಕಾರುಗಳು ಸಂಚರಿಸುತ್ತವೆ. 10–15 ವರ್ಷಗಳಷ್ಟು ಹಳೆಯದಾದ ವಾಹನಗಳ ಸಂಚಾರ ನಿರ್ಬಂಧಿಸುವ ಯೋಜನೆಯ ಅನುಷ್ಠಾನ ಏನಾಯಿತು’ ಎಂದು ಕೇಳಿತು.

‘ಇದನ್ನೆಲ್ಲ ನಿಲ್ಲಿಸುವಂತೆ ಇವರಿಗೆ ಯಾರು ಹೇಳಬೇಕು? ನೆರೆಯ ರಾಜ್ಯಗಳೂ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದರೆ, ವಾಹನಗಳನ್ನು ನಿರ್ಬಂಧಿಸುವುದರಲ್ಲಿ ಅಥವಾ ಮನೆಯಿಂದಲೇ ಕೆಲಸ ಮಾಡಿಸುವುದರಲ್ಲಿ ಅರ್ಥವಿಲ್ಲ ಎಂದು ದೆಹಲಿ ಸರ್ಕಾರ ಹೇಳುತ್ತಿದೆ. ಇದನ್ನು ತಡೆಯಲು, ರಾಷ್ಟ್ರ ರಾಜಧಾನಿ ವಲಯದಲ್ಲಿನ ವಾಯು ಗುಣಮಟ್ಟವನ್ನು ನಿರ್ವಹಣೆ ಮಾಡುವ ಆಯೋಗವೇ ನಮಗೆ ಕ್ರಮಗಳನ್ನು ಹೇಳಬೇಕು’ ಎಂದು ನ್ಯಾಯಪೀಠ ಹೇಳಿತು.

ಎಲ್ಲರೂ ಮನೆಯಿಂದಲೇ ಕೆಲಸ ಮಾಡುವುದು ಅಖಿಲ ಭಾರತ ಮಟ್ಟದ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು. ಇದಕ್ಕೆ ಪ್ರತಿಕ್ರಿಯೆ ಕೊಟ್ಟ ಪೀಠವು, ಎಲ್ಲರನ್ನೂ ಕಚೇರಿಗೆ ಕರೆಯುವ ಬದಲು ಶೇಕಡಾ 50ರಷ್ಟು ಅಧಿಕಾರಿಗಳನ್ನು ಕರೆಯಿರಿ. ಕಚೇರಿಗೆ ಹತ್ತಿರದಲ್ಲಿ ನೆಲೆಸಿರುವ ಅಧಿಕಾರಿಗಳು ಸಾರ್ವಜನಿಕ ಸಾರಿಗೆಯನ್ನೇ ಬಳಸಲಿ ಎಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.