ADVERTISEMENT

ಬಿಹಾರ: ವಾಯುದಾಳಿ ಸಾಕ್ಷ್ಯ ಕೇಳಿದ್ದಕ್ಕೆ ಬೇಸರಗೊಂಡು ಕಾಂಗ್ರೆಸ್ ತ್ಯಜಿಸಿದ ನಾಯಕ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 14:47 IST
Last Updated 9 ಮಾರ್ಚ್ 2019, 14:47 IST
ಎಎನ್‌ಐ ಚಿತ್ರ
ಎಎನ್‌ಐ ಚಿತ್ರ   

ಪಟ್ನಾ: ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುಪಡೆಯು ನಡೆಸಿದ ದಾಳಿಯ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವಂತೆ ಕೇಳಿದ್ದರಿಂದ ಬೇಸರವಾಗಿದ್ದು, ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಬಿಹಾರ ಕಾಂಗ್ರೆಸ್‌ ವಕ್ತಾರ ವಿನೋದ್‌ ಶರ್ಮಾ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶರ್ಮಾ, ‘ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ, ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡುತ್ತಿದ್ದೇನೆ. ಪಾಕಿಸ್ತಾನದಲ್ಲಿರುವ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯ ಸಾಕ್ಷಗಳನ್ನು ಕೇಳಿದ ಕಾಂಗ್ರೆಸ್‌ ನಡೆಯಿಂದ ಬೇಸರವಾಗಿದೆ’ ಎಂದು ತಿಳಿಸಿದ್ದಾರೆ.

ವಾಯುದಾಳಿಯಿಂದಾಗಿ 250ಕ್ಕೂ ಹೆಚ್ಚು ಉ್ರಗರು ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಕಾಂಗ್ರೆಸ್, ದಾಳಿಯ ಸಾಕ್ಷ್ಯ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿತ್ತು. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದಾಳಿಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಬಿಜೆಪಿ ನಾಯಕರಿಗೆ ಆಗ್ರಹಿಸಿದ್ದರು.

ADVERTISEMENT

‘ನಾವು ವಾಯುದಾಳಿಯನ್ನು ರಾಜಕೀಯಗೊಳಿಸಬಾರದು. ರಾಹುಲ್‌ ಗಾಂಧಿ ಅವರೇ ಹೇಳುವಂತೆ ರಾಷ್ಟ್ರದ ಭದ್ರತೆಗಾಗಿ ಸೇನೆಯು ಕೈಗೊಳ್ಳುವ ಪ್ರತಿಯೊಂದು ಕ್ರಮವನ್ನು ಬೆಂಬಲಿಸಬೇಕು. ಇಂತಹ ಸನ್ನಿವೇಶಗಳಲ್ಲಿ ನಾವು ಒಗ್ಗಟ್ಟಾಗಿರಬೇಕು’

‘ಆದರೆ ಕೆಲವರು ಈ ವಿಚಾರವನ್ನು ರಾಜಕೀಯಗೊಳಿಸಲು ಪ್ರಯತ್ನಿಸಿದರೆ ಹಾಗೂ ಸೇನೆಯ ಶ್ರಮದ ಶ್ರೇಯವನ್ನು ಪಡೆದುಕೊಳ್ಳಲು ಪ್ರಯತ್ನಿಸಿದರೆ ಅದು ಒಳ್ಳೆಯದಲ್ಲ. ಕರ್ನಾಟಕದ ಬಿಜೆಪಿ ಘಟಕದ ಅಧ್ಯಕ್ಷರ ಹೇಳಿಕೆಯೊಂದಿಗೆ ಅದು ಬಯಲಾಯಿತು. ನಾವೀಗ ರಾಷ್ಟ್ರದ ಹಿತದೃಷ್ಟಿಯತ್ತ ಗಮನಹರಿಸಬೇಕು’ ಎಂದುಖರ್ಗೆ ಹೇಳಿದ್ದರು.

ವಾಯುದಾಳಿಯಿಂದ ಬಿಜೆಪಿಗೆ ನೆರವಾಗಲಿದೆ. ಇದರಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿರುವ ಒಟ್ಟು 28ರಲ್ಲಿ 22 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿದೆ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ ನೀಡಿದ್ದರು. ಯಡಿಯೂರಪ್ಪ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.