ADVERTISEMENT

ದೇಶದ ವಿರುದ್ಧ ನಡೆದ ದಾಳಿಗಳ ಪ್ರತೀಕಾರಕ್ಕಾಗಿ ಭದ್ರತೆ ಬಲಗೊಳಿಸಬೇಕು: ಡೊಭಾಲ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 14:23 IST
Last Updated 11 ಜನವರಿ 2026, 14:23 IST
ಅಜಿತ್‌ ಡೊಭಾಲ್‌
ಅಜಿತ್‌ ಡೊಭಾಲ್‌   

ನವದೆಹಲಿ: ಭಾರತ ಗಡಿಯಲ್ಲಿ ಭದ್ರತೆಯನ್ನು ಬಲಪಡಿಸಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಭದ್ರತೆ ಹೆಚ್ಚಿಸಬೇಕು. ಇತಿಹಾಸದಲ್ಲಿ ನಡೆದ ದಾಳಿಗಳ ವಿರುದ್ಧ ‘ಪ್ರತೀಕಾರ’ಕ್ಕಾಗಿ ಮತ್ತು ಮುಂದೆ ಅಂಥ ದಾಳಿಗಳನ್ನು ತಡೆಯಲು ಭದ್ರತೆಯನ್ನು ಬಲಗೊಳಿಸಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಹೇಳಿದರು.

ವಿಕಸಿತ ಭಾರತ ಯುವ ಪ್ರತಿನಿಧಿಗಳ ಸಂವಾದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ‘ನೀವೆಲ್ಲಾ ಅದೃಷ್ಟವಂತರು, ಸ್ವತಂತ್ರ ಭಾರತದಲ್ಲಿ ಜನಿಸಿದ್ದೀರಿ. ನಾನು ವಸಹಾತುಶಾಹಿ ಭಾರತದಲ್ಲಿ ಜನಿಸಿದೆ. ನನ್ನ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅನೇಕ ವಿಚಾರಣೆಗಳನ್ನು ಎದುರಿಸಿದರು’ ಎಂದು ಹೇಳಿದರು.

‘ಭಗತ್‌ ಸಿಂಗ್‌ ಅವರಂತಹ ವ್ಯಕ್ತಿಗಳನ್ನು ಗಲ್ಲಿಗೇರಿಸಲಾಯಿತು, ಸುಭಾಷ್‌ ಚಂದ್ರ ಬೋಸ್‌ ಅವರು ಜೀವನವಿಡೀ ಕಷ್ಟಪಟ್ಟರು ಮತ್ತು ನಮಗೆ ಸ್ವಾತಂತ್ರ್ಯ ಕೊಡಿಸಲು ಮಹಾತ್ಮ ಗಾಂಧಿ ಅವರು ಸತ್ಯಾಗ್ರಹ ಮಾಡಿದರು’ ಎಂದರು.

‘ಸೇಡು ಅಥವಾ ಪ್ರತೀಕಾರ ಎಂಬುದು ಒಳ್ಳೆಯ ಪದವಲ್ಲ. ಆದರೆ, ಸರಿಯಾಗಿ ಬಳಸಿದರೆ ಅದು ದೊಡ್ಡ ಶಕ್ತಿಯಾಗಬಹುದು. ನಾವು ನಮ್ಮ ಇತಿಹಾಸದ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. ಗಡಿ ಭದ್ರತೆಯ ವಿಷಯದಲ್ಲಿ ಮಾತ್ರವಲ್ಲದೆ ಆರ್ಥಿಕತೆ, ಸಾಮಾಜಿಕ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ವಿಚಾರದಲ್ಲಿಯೂ ಈ ದೇಶವನ್ನು ಶ್ರೇಷ್ಠ ಹಂತಕ್ಕೆ ಕೊಂಡೊಯ್ಯಬೇಕು’ ಎಂದು ಪ್ರತಿಪಾದಿಸಿದರು.

‘ಒಮ್ಮೆ ನೆಪೋಲಿಯನ್‌, ‘ಕುರಿಯೊಂದರ ನೇತೃತ್ವದ 1,000 ಸಿಂಹಗಳ ಗುಂಪಿಗೆ ನಾನು ಹೆದರುವುದಿಲ್ಲ, ಅದೇ ಸಿಂಹವೊಂದರ ನೇತೃತ್ವದ 1,000 ಕುರಿಗಳ ಹಿಂಡಿಗೆ ಹೆದರುತ್ತೇನೆ’ ಎಂದಿದ್ದರು. ನಾಯಕತ್ವ ಎನ್ನುವುದು ಅಷ್ಟು ಮಹತ್ವದ್ದು’ ಎಂದು ಹೇಳಿದರು.

‘ನಾವು ಪ್ರಗತಿಶೀಲ ಸಮಾಜವನ್ನು ಹೊಂದಿದ್ದೇವೆ. ಬೇರೆ ನಾಗರಿಕತೆಗಳು ಅಥವಾ ದೇಗುಲಗಳ ಮೇಲೆ ನಾವು ದಾಳಿ ನಡೆಸಿಲ್ಲ. ಆದರೆ ಭದ್ರತೆಯ ವಿಚಾರದಲ್ಲಿ ಇತಿಹಾಸ ಕಲಿಸಿದ ಪಾಠವನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ’ ಎಂದು ವಿವರಿಸಿದರು.

‘ಹಿಂದೆ ಕಲಿತ ಪಾಠಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಈ ದೇಶದ ಯುವಜನರು ಅದನ್ನು ಮರೆತ,ರೆ ದೇಶದ ಪಾಲಿಗೆ ಅದು ದುರಂತವಾಗಬಹುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.