
ಲಖನೌ: ‘ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಇಂತಿಷ್ಟು ಸಂಖ್ಯೆಯ ಮತದಾರರು ಪಟ್ಟಿಯಿಂದ ಹೊರಗುಳಿಯುತ್ತಾರೆ ಎಂಬುದಾಗಿ ಬಿಜೆಪಿ ನಾಯಕರಿಗೆ ಮೊದಲೇ ಹೇಗೆ ಗೊತ್ತಾಗುತ್ತದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶನಿವಾರ ಪ್ರಶ್ನಿಸಿದರು.
ಇದು ಭಾರತೀಯ ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮತದಾರರ ಕರಡು ಪಟ್ಟಿ ಬಿಡುಗಡೆಗೂ ಮೊದಲೇ ಎಷ್ಟು ಮತದಾರರ ಹೆಸರುಗಳನ್ನು ಅಳಿಸಲಾಗಿರುತ್ತದೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ. ಆದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸುಮಾರು ನಾಲ್ಕು ಕೋಟಿ ಮತದಾರರನ್ನು ಅಳಿಸಲಾಗಿದೆ ಎಂದು ಹೇಗೆ ಹೇಳಿದರು’ ಎಂದು ಅಖಿಲೇಶ್ ಪ್ರಶ್ನಿಸಿದರು.
ಅದೇ ರೀತಿಯ ಕನೌಜಿನ ಮಾಜಿ ಸಂಸದರೊಬ್ಬರು ಜಿಲ್ಲೆಯೊಂದರಲ್ಲಿ ಈಗಾಗಲೇ ಮೂರು ಲಕ್ಷ ಮತಗಳನ್ನು ತೆಗೆಯಲಾಗಿದೆ ಎಂದೂ ಹೇಳಿದ್ದಾರೆ ಎಂದರು. ‘ಬಿಜೆಪಿ ನಾಯಕರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರೆ ಚುನಾವಣಾ ಆಯೋಗವನ್ನು ನಂಬುವುದು ಹೇಗೆ. ಅದರ ವಿಶ್ವಾಸಾರ್ಹತೆ ಎಲ್ಲಿ ಉಳಿಯುತ್ತದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.