ADVERTISEMENT

ಎಸ್‌ಪಿ ನೆಲೆ ಭದ್ರಕ್ಕೆ ಅಖಿಲೇಶ್ ಕಾರ್ಯತಂತ್ರ

ಆಜಂಗಢದಲ್ಲಿ ಕಚೇರಿ ಸಂಕೀರ್ಣ ಉದ್ಘಾಟಿಸಿದ ಅಖಿಲೇಶ್ * ಮುಲಾಯಂ,ಕಾನ್ಶಿ ರಾಮ್‌ ಮೈತ್ರಿ ಸ್ಮರಣೆ

ಪಿಟಿಐ
Published 3 ಜುಲೈ 2025, 15:50 IST
Last Updated 3 ಜುಲೈ 2025, 15:50 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಆಜಂಗಢ(ಉತ್ತರ ಪ್ರದೇಶ): ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರು ಆಜಂಗಢದಲ್ಲಿ ಪಕ್ಷದ ನೂತನ ಕಚೇರಿಯನ್ನು ಗುರುವಾರ ಉದ್ಘಾಟಿಸಿದ್ದಾರೆ. ಆ ಮೂಲಕ, ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಪಕ್ಷದ ನೆಲೆಯನ್ನು ಭದ್ರಗೊಳಿಸಲು ಮುಂದಾಗಿದ್ದಾರೆ.

ಈ ವೇಳೆ ಮಾತನಾಡಿದ ಅವರು, ‘ನನ್ನ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಆಜಂಗಢದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ಇಲ್ಲಿನ ಜನರು ಯಾವಾಗಲೂ ನೇತಾಜಿ (ಮುಲಾಯಂ ಸಿಂಗ್‌) ಅವರೊಂದಿಗೆ ನಿಂತಿದ್ದರು’ ಎಂದು ಭಾವುಕರಾಗಿ ಹೇಳಿದರು.

ಕಾರ್ಯಕ್ರಮದ ನಡುವೆ, ಪಕ್ಷದ ಯುವ ಕಾರ್ಯಕರ್ತರೊಬ್ಬರು ಮುಲಾಯಂ ಸಿಂಗ್‌ ಯಾದವ್ ಹಾಗೂ ಕಾನ್ಶಿ ರಾಮ್ ಅವರು ಒಟ್ಟಿಗೆ ಇರುವ ಭಾವಚಿತ್ರವನ್ನು ಪ್ರದರ್ಶಿಸಿದ್ದನ್ನು ಪ್ರಸ್ತಾಪಿಸಿದ ಅಖಿಲೇಶ್‌,‘ಆಗಿನ ದಿನಗಳು ಎಷ್ಟೊಂದು ಮಹತ್ವದ್ದಾಗಿದ್ದವು ಎಂಬುದನ್ನು ಈ ಭಾವಚಿತ್ರ ಹೇಳುತ್ತದೆ. ಆಗ ಎರಡು ಸಿದ್ಧಾಂತಗಳು ಒಟ್ಟಿಗೆ ಸಾಗಿದ್ದವು ಎಂಬುದನ್ನು ಇದು ತೋರಿಸುತ್ತದೆ’ ಎಂದರು.

ADVERTISEMENT

1990ರ ದಶಕದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಜನಪ್ರಿಯತೆ ಏರುಗತಿಯಲ್ಲಿತ್ತು. ಅದರ ವಿರುದ್ಧ ಹೋರಾಡುವುದಕ್ಕಾಗಿ ದಲಿತ ಸಮುದಾಯದ ಮೇರು ನಾಯಕ ಕಾನ್ಶಿ ರಾಮ್‌ ಹಾಗೂ ಮುಲಾಯಂ ಸಿಂಗ್‌ ಮೈತ್ರಿ ಮಾಡಿಕೊಂಡಿದ್ದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅಖಿಲೇಶ್‌,‘ಹಲವು ರಾಜ್ಯಗಳಲ್ಲಿ ಬಿಜೆಪಿ ಬಹು ಮಹಡಿಗಳುಳ್ಳ ಕಚೇರಿಗಳನ್ನು ಹೊಂದಿದೆ. ಅಜಂಗಢದಲ್ಲಿ ಚಿಕ್ಕ ಕಚೇರಿ ಇದೆ. ಈ ಕ್ಷೇತ್ರದಲ್ಲಿ ಗೆಲುವು ಅಸಾಧ್ಯ ಎಂಬುದು ಅವರಿಗೆ ಮನವರಿಕೆಯಾಗಿರುವುದನ್ನು ಇದು ತೋರಿಸುತ್ತದೆ’ ಎಂದರು.

‘ಬಿಹಾರದಲ್ಲಿ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಬಿಜೆಪಿಯವರು ಮೀಸಲಾತಿ, ಸಂವಿಧಾನ ಮತ್ತು ಜಾತ್ಯತೀತ ತತ್ವದ ವಿರುದ್ಧ ಮಾತನಾಡಲು ಆರಂಭಿಸುತ್ತಾರೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ ಎಂಬುದು ಗೊತ್ತಾದ ಕೂಡಲೇ ತಮ್ಮ ವರಸೆ ಬದಲಿಸುತ್ತಾರೆ’ ಎಂದು ಟೀಕಿಸಿದರು.

ಆಜಂಗಢ ಲೋಕಸಭಾ ಕ್ಷೇತ್ರ ಹಾಗೂ ಈ ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಸಮಾಜವಾದಿ ಪಕ್ಷದ ಹಿಡಿತದಲ್ಲಿವೆ. 2019ರಿಂದ 2024ರ ವರೆಗೆ ಆಜಂಗಢ ಲೋಕಸಭಾ ಕ್ಷೇತ್ರವನ್ನು ಅಖಿಲೇಶ್‌ ಪ್ರತಿನಿಧಿಸುತ್ತಿದ್ದರು. ಸದ್ಯ, ಈ ಕ್ಷೇತ್ರವನ್ನು ಅವರ ಸಂಬಂಧಿ ಧರ್ಮೇಂದ್ರ ಯಾದವ್ ಪ್ರತಿನಿಧಿಸುತ್ತಿದ್ಧಾರೆ. ನೂತನ ಕಚೇರಿಗೆ ‘ಪಿಡಿಎ ಭವನ’ ಎಂದು ಹೆಸರಿಡಲಾಗಿದೆ.

ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಬಿಜೆಪಿ ನಾಯಕರು ಮೀಸಲಾತಿ ಸಮಾಜವಾದ ಮತ್ತು ಜಾತ್ಯತೀತ ತತ್ವಗಳನ್ನು ಗುರಿಯಾಗಿಸುವ ಕಾರ್ಯತಂತ್ರದ ಮೊರೆ ಹೋಗುತ್ತಾರೆ
ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.