ADVERTISEMENT

ಉತ್ತರ ಪ್ರದೇಶ: ಅಸಾಧ್ಯ ಮೈತ್ರಿ ಸಾಧ್ಯವಾಗಿದ್ದು ಇವರಿಬ್ಬರ ತಂತ್ರಗಾರಿಕೆಯಿಂದ

ಮಾಯಾವತಿ, ಅಖಿಲೇಶ್ ರಾಜಕೀಯ ತಂತ್ರಗಾರಿಕೆಯ ಚಾಣಕ್ಯರಿವರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 8:25 IST
Last Updated 25 ಮಾರ್ಚ್ 2019, 8:25 IST
ಸತೀಶ್‌ಚಂದ್ರ ಮಿಶ್ರಾ ಮತ್ತು ರಾಜೇಂದ್ರ ಚೌಧರಿ
ಸತೀಶ್‌ಚಂದ್ರ ಮಿಶ್ರಾ ಮತ್ತು ರಾಜೇಂದ್ರ ಚೌಧರಿ   

ಚುನಾವಣೆಯ ಕಾವು ಏರುತ್ತಿದ್ದಂತೆ ಪ್ರಚಾರ ಭರಾಟೆ ಜೋರಾಗುತ್ತಿದೆ. ರಾಜಕೀಯ ತಂತ್ರಗಾರಿಕೆ, ಮೈತ್ರಿ ಮತ್ತಿತರ ಚಟುವಟಿಕೆಗಳೂ ಗರಿಗೆದರಿವೆ. ರಾಜಕಾರಣಿಗಳ ಭಾಷಣ ಕೇಳುವ, ಪ್ರಮುಖ ನಿರ್ಧಾರಗಳ ಬಗ್ಗೆ ತಿಳಿದುಕೊಳ್ಳುವ ನಮಗೆ ಅವುಗಳ ಹಿಂದೆ ಕೆಲಸ ಮಾಡುವ ಕೈಗಳ ಬಗ್ಗೆ ಗೊತ್ತೇ?

ಪ್ರತಿಯೊಬ್ಬ ರಾಜಕೀಯ ಮುಖಂಡರ ಪ್ರಮುಖ ನಿರ್ಧಾರಗಳು, ಭಾಷಣ ತಯಾರಿ, ಪ್ರಚಾರ ತಂತ್ರಗಾರಿಕೆ, ಮೈತ್ರಿ ನಿರ್ಧಾರ, ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರದ ತಂತ್ರಗಾರಿಕೆ ಹಿಂದೆ ಹಲವು ರಾಜಕೀಯ ಕುಶಾಗ್ರಮತಿಗಳ ಶ್ರಮವಿದೆ. ಉತ್ತರ ಪ್ರದೇಶದಲ್ಲಿ ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮೈತ್ರಿ ಮಾಡಿಕೊಂಡಿದ್ದರ ಹಿಂದೆ ಮಾಜಿ ಮುಖ್ಯಮಂತ್ರಿ ಅಖಿಲೇಶ್ ರಾಜಕೀಯ ಸಲಹೆಗಾರ ರಾಜೇಂದ್ರ ಚೌಧರಿ, ಬಿಎಸ್‌ಪಿ ವರಿಷ್ಠೆ ಮಾಯಾವತಿ ರಾಜಕೀಯ ಸಲಹೆಗಾರಸತೀಶ್‌ಚಂದ್ರ ಮಿಶ್ರಾ ತಂತ್ರಗಾರಿಕೆಇದೆ.

ಸತೀಶ್‌ಚಂದ್ರ ಮಿಶ್ರಾ

ADVERTISEMENT

ಇವರುಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರ ಪ್ರಮುಖ ರಾಜಕೀಯ ಸಲಹೆಗಾರರು. ಪಕ್ಷದಲ್ಲಿ ಮಾಯಾವತಿ ಅವರಿಗಿಂತ ನಂತರದ ಸ್ಥಾನವನ್ನೂ ಪಡೆದುಕೊಂಡಿದ್ದಾರೆ. ಬಿಎಸ್‌ಪಿ ಸರ್ಕಾರದಲ್ಲಿ ಸಚಿವರಾಗಿದ್ದ ಇವರು, ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಜತೆಗಿನ ಮೈತ್ರಿಯಿಂದ ಪಕ್ಷವನ್ನು ದೂರವಿಡುವಲ್ಲಿ ಮತ್ತುಎಸ್‌ಪಿ ಜತೆ ಸಖ್ಯ ಬೆಳೆಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮೇಲ್ಜಾತಿ ಮತಬ್ಯಾಂಕ್ ಒದಗಿಸಿದ್ದ ಚತುರ:ವೃತ್ತಿಯಲ್ಲಿ ವಕೀಲರಾಗಿರುವ ಮಿಶ್ರಾ ಜಾತಿಯಲ್ಲಿ ಬ್ರಾಹ್ಮಣ. ಉತ್ತರ ಪ್ರದೇಶದ ಕಾನ್ಪುರದಲ್ಲಿ 1952ರ ನವೆಂಬರ್ 9ರಂದು ಜನನ. ರಾಜ್ಯದ ವಕೀಲರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಇವರು 2004ರಲ್ಲಿ ಬಿಎಸ್‌ಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. ಸದ್ಯ ರಾಜ್ಯಸಭಾ ಸದಸ್ಯರು. ಪ್ರಮುಖವಾಗಿ ದಲಿತ ಮತಬ್ಯಾಂಕ್‌ ಹೊಂದಿರುವ ಬಿಎಸ್‌ಪಿಯು ಮೇಲ್ಜಾತಿ ಮತಗಳೂ ದೊರೆತು ಬಹುಮತದ ಸರ್ಕಾರ ರಚಿಸುವಂತೆ (2007ರಲ್ಲಿ) ಮಾಡುವಲ್ಲಿ ಇವರ ರಾಜಕೀಯ ಚತುರತೆ ಅಡಗಿದೆ. ಪಕ್ಷದ ಚಿಹ್ನೆ ‘ಆನೆ’ಯನ್ನು ಕೇವಲ ಆನೆಯಲ್ಲ ಗಣೇಶನ ರೂಪ (ಹಾಥಿ ನಹೀ ಗಣೇಶ್ ಹೇ) ಎಂದು ಬಿಂಬಿಸಿ ತಮ್ಮ ಪಕ್ಷವು ಮೇಲ್ಜಾತಿಯವರ ಪರವಾಗಿಯೂ ಇದೆ ಎಂಬ ಸಂದೇಶ ಸಾರಿದ್ದರು.

ರಾಜೇಂದ್ರ ಚೌಧರಿ

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ರಾಜಕೀಯ ಸಲಹೆಗಾರರಿವರು. ಗಾಜಿಯಾಬಾದ್‌ನಲ್ಲಿ ಜನಿಸಿದ ಇವರು 1978ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು. ಕಾನೂನು ಪದವೀಧರರಾಗಿರುವ ಚೌಧರಿ, ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. 90ರ ದಶಕದಿಂದಲೇ ಎಸ್‌ಪಿ ಜತೆ ಗುರುತಿಸಿಕೊಂಡಿದ್ದಾರೆ. 2002ರ ಎಸ್‌ಪಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 2012ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ನೇಮಕವಾದದ್ದಲ್ಲದೆ, 2013ರಿಂದ ಅಖಿಲೇಶ್ ಸಂಪುಟದಲ್ಲಿ ಸಚಿವರಾಗಿಕಾರ್ಯನಿರ್ವಹಿಸಿದ್ದಾರೆ.

2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಎದುರು ಸೋತ ಬಳಿಕ ಸಮಾಜವಾದಿ ಪಕ್ಷದ ರಾಜಕೀಯ ತಂತ್ರಗಾರಿಕೆಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿಯ ಗೆಲುವಿಗಾಗಿ ಜಾತಿ ಲೆಕ್ಕಾಚಾರದ ಮೂಲಕ ತಂತ್ರಗಾರಿಕೆ ರೂಪಿಸಲು ಅಖಿಲೇಶ್‌ಗೆ ಸಲಹೆ ಕೊಟ್ಟವರೇ ಚೌಧರಿ ಎನ್ನಲಾಗಿದೆ. ಪರಿಣಾಮವಾಗಿ ರಾಜ್ಯದಲ್ಲಿ ಬದ್ಧ ವೈರಿಯಾಗಿದ್ದ ಬಿಎಸ್‌ಪಿ ಜತೆ ಪಕ್ಷ ಮೈತ್ರಿ ಮಾಡಿಕೊಂಡಿದೆ. ಮುಲಾಯಂ ಸಿಂಗ್‌ ಅವರಿಗೂ ಆಪ್ತರಾಗಿರುವ ಚೌಧರಿ ರಾಜಕೀಯ ಸಲಹೆಗಾರ ಮಾತ್ರವಲ್ಲದೆ ಪಕ್ಷದ ರಾಷ್ಟ್ರೀಯ ವಕ್ತಾರರೂ ಆಗಿದ್ದಾರೆ.

ಅಂದಹಾಗೆ, ಚೌಧರಿ ಅವರ ಮೈತ್ರಿ ಯೋಜನೆಯನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಿರಣ್‌ಮಯ್ ನಂದಾ ಎಂಬುವವರು. ಪಶ್ಚಿಮ ಬಂಗಾಳದ ಎಡಪಕ್ಷದ ಸರ್ಕಾರದಲ್ಲಿ ಸಚಿವರಾಗಿದ್ದ ಇವರೂ ಅಖಿಲೇಶ್‌ಗೆ ಆಪ್ತರು. ಬಿಎಸ್‌ಪಿ ಜತೆ ಮೈತ್ರಿ ಮಾತುಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಹಮದಾಬಾದ್‌ನ ಐಐಎಂನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದ ಅಭಿಷೇಕ್ ಮಿಶ್ರಾ ಮತ್ತು ಅಖಿಲೇಶ್ ಬಾಲ್ಯದ ಸ್ನೇಹಿತ ಆಶಿಷ್ ಯಾದವ್‌ ಪಕ್ಷದ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮಾಡುತ್ತಿದ್ದಾರೆ.

(ಇನ್ನಷ್ಟು ಚಾಣಕ್ಯರ ಪರಿಚಯ ನಾಳೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.