ADVERTISEMENT

ಯೋಗಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದ ವಿದ್ಯಾರ್ಥಿನಿ ಎಸ್‌ಪಿ ಅಭ್ಯರ್ಥಿ

ಪಿಟಿಐ
Published 2 ಫೆಬ್ರುವರಿ 2022, 10:54 IST
Last Updated 2 ಫೆಬ್ರುವರಿ 2022, 10:54 IST
ಪೂಜಾ ಶುಕ್ಲಾ ಟ್ವಿಟರ್ ಖಾತೆಯ ಚಿತ್ರ
ಪೂಜಾ ಶುಕ್ಲಾ ಟ್ವಿಟರ್ ಖಾತೆಯ ಚಿತ್ರ   

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದ 25 ವರ್ಷದ ವಿದ್ಯಾರ್ಥಿನಿ ಪೂಜಾ ಶುಕ್ಲಾ ಎಂಬವರಿಗೆ ರಾಜಕೀಯ ಮುಖ್ಯ ವಾಹಿನಿಯ ಬಾಗಿಲು ತೆರೆದಿದೆ.

ಪೂಜಾ ಶುಕ್ಲಾ ಅವರು ಈಗ ಲಖನೌ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಶುಕ್ಲಾ ಅವರು ಜೂನ್ 2017ರಲ್ಲಿ ಇತರ 10 ಮಂದಿ ವಿದ್ಯಾರ್ಥಿಗಳೊಂದಿಗೆ ಲಖನೌ ವಿಶ್ವವಿದ್ಯಾಲಯದ ರಸ್ತೆಯಲ್ಲಿ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಿ ಕಪ್ಪು ಬಾವುಟ ಪ್ರದರ್ಶಿಸಿ ಗಮನ ಸೆಳೆದಿದ್ದರು. ಆದಿತ್ಯನಾಥ್ ಅವರ ಬೆಂಗಾವಲು ಪಡೆಯನ್ನು ತಡೆದಿದ್ದರು.

ADVERTISEMENT

‘ಜೂನ್ 7, 2017 ರಂದು, `ಹಿಂದಿ ಸ್ವರಾಜ್ ದಿವಸ್’ಕಾರ್ಯಕ್ರಮದಲ್ಲಿ ಭಾಗವಹಿಸಲು ಯೋಗಿ ಲಖನೌ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ತೆರಳುತ್ತಿದ್ದಾಗ, ಅಖಿಲ ಭಾರತ ವಿದ್ಯಾರ್ಥಿ ಸಂಘ, ಭಾರತೀಯ ವಿದ್ಯಾರ್ಥಿ ಒಕ್ಕೂಟ ಮತ್ತು ಸಮಾಜವಾದಿ ಛತ್ರ ಸಭಾದ ವಿದ್ಯಾರ್ಥಿಗಳು ಒಟ್ಟಾಗಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದೆವು. ಯೋಗಿ ಅವರ ಬೆಂಗಾವಲು ಪಡೆಯನ್ನು ತಡೆದಿದ್ದೆವು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದ್ದೆವು’ಎಂದು ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.

ಮರುದಿನ ನಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಪ್ರತಿಭಟನೆಗೆ ಪ್ರಜಾಸತ್ತಾತ್ಮಕ ವಿಧಾನಗಳನ್ನು ಬಳಸಿದ್ದರೂ ನಮ್ಮ ಬಂಧನವಾಗಿತ್ತು. ನಾವು ಬಂಧನಕ್ಕೊಳಗಾಗುತ್ತೇವೆ ಎಂದು ಎಂದಿಗೂ ಯೋಚಿಸಿರಲಿಲ್ಲ ಆದರೆ ಆ ಘಟನೆ ಒಳ್ಳೆಯದ್ದಕ್ಕಾಗಿ ಹೋರಾಡುವ ನನ್ನ ನಂಬಿಕೆಯನ್ನು ಮತ್ತಷ್ಟು ದೃಢಗೊಳಿಸಿತು ಎಂದು ಅವರು ಹೇಳಿದ್ದಾರೆ.

20 ದಿನಗಳ ಬಳಿಕ ಜೈಲಿನಿಂದ ಹೊರಬಂದ ನಂತರ, ಪೂಜಾ ಶುಕ್ಲಾ ಅವರು ಎಸ್‌ ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿಯಾಗಿದ್ದರು. ಬಳಿಕ ಪಕ್ಷದ ವಿದ್ಯಾರ್ಥಿ ವಿಭಾಗವಾದ ಸಮಾಜವಾದಿ ಛತ್ರ ಸಭಾಕ್ಕೆ ಸೇರ್ಪಡೆಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.