
ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಹೋರಾಡಲು ತೋರುತ್ತಿರುವ ಧೈರ್ಯವನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೊಂಡಾಡಿದ್ದಾರೆ.
ಅಖಿಲೇಶ್ ಅವರು ಸಂಸದರೂ ಆಗಿರುವ ಪತ್ನಿ ಡಿಂಪಲ್ ಯಾದವ್ ಅವರೊಂದಿಗೆ ಮಂಗಳವಾರ ಇಲ್ಲಿ ಮಮತಾ ಅವರನ್ನು ಭೇಟಿಯಾಗಿ ಸುಮಾರು 40 ನಿಮಿಷ ಮಾತುಕತೆ ನಡೆಸಿದರು.
‘ಇಡೀ ದೇಶದಲ್ಲಿ ಬಿಜೆಪಿಯನ್ನು ಎದುರಿಸಲು ‘ದೀದಿ’ (ಮಮತಾ ಬ್ಯಾನರ್ಜಿ) ಅವರಿಗೆ ಮಾತ್ರ ಸಾಧ್ಯ’ ಎಂದು ಭೇಟಿಯ ಬಳಿಕ ಅಖಿಲೇಶ್ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ ಹಾಗೂ ಜನರಿಗೆ ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿದರು. ಉತ್ತರ ಪ್ರದೇಶದಲ್ಲಿ ಸುಮಾರು 2.89 ಕೋಟಿ ಮತದಾರರನ್ನು ಕರಡು ಪಟ್ಟಿಯಿಂದ ಕೈಬಿಟ್ಟಿರುವುದನ್ನು ಅವರು ಉಲ್ಲೇಖಿಸಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೋಲ್ಕತ್ತಕ್ಕೆ ಬಂದಿರುವ ಅಖಿಲೇಶ್ ಅವರು ಮಧ್ಯಾಹ್ನ ಸುಮಾರು 1.40ಕ್ಕೆ ಮುಖ್ಯಮಂತ್ರಿ ಅವರ ಕಚೇರಿಗೆ ಬಂದರು.
ಬಿಜೆಪಿ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದ ಅಖಿಲೇಶ್, ‘ದೀದಿ’ ಅವರು ಇ.ಡಿಯನ್ನು (ಜಾರಿ ನಿರ್ದೇಶನಾಲಯ) ಸೋಲಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ಬಿಜೆಪಿಯನ್ನು ಸೋಲಿಸುತ್ತಾರೆ ಎಂಬುದು ನಮಗೆ ಖಚಿತವಾಗಿದೆ’ ಎಂದಿದ್ದರು.
ಐ–ಪ್ಯಾಕ್ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಇ.ಡಿ ದಾಳಿಯ ಸಂದರ್ಭದಲ್ಲಿ ಮಮತಾ ಅವರು ಎರಡೂ ಸ್ಥಳಗಳಿಗೆ ಧಾವಿಸಿ ಬಂದದ್ದನ್ನು ಉಲ್ಲೇಖಿಸಿ ಅಖಿಲೇಶ್ ಈ ಹೇಳಿಕೆ ಕೊಟ್ಟಿದ್ದರು.
ಜಾಪ್ರಭುತ್ವ ಉಳಿಸಲು ನಡೆಸುತ್ತಿರುವ ಹೋರಾಟದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡುತ್ತೇವೆಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ಮುಖ್ಯಸ್ಥ
ಮಮತಾ ದೆಹಲಿ ಭೇಟಿ ಸಾಧ್ಯತೆ
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಎಸ್‌ಐಆರ್ ವಿರುದ್ಧ ನಡೆಸುತ್ತಿರುವ ಹೋರಾಟದ ಭಾಗವಾಗಿ ಮಮತಾ ಬ್ಯಾನರ್ಜಿ ಅವರು ಮುಂದಿನ ವಾರ ನವದೆಹಲಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ಕಾರಣ ರಾಜ್ಯದ ಮಧ್ಯಂತರ ಬಜೆಟ್ ಮಂಡನೆಯನ್ನು ಫೆಬ್ರುವರಿ 5ಕ್ಕೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮುಂಚಿನ ವೇಳಾಪಟ್ಟಿಯಂತೆ ಬಜೆಟ್ ಅಧಿವೇಶನ ಜನವರಿ 31ಕ್ಕೆ ಆರಂಭವಾಗಿ ಫೆಬ್ರುವರಿ 3ರಂದು ಬಜೆಟ್ ಮಂಡನೆ ನಡೆಯಬೇಕಿತ್ತು. ಪರಿಷ್ಕೃತ ವೇಳಾಪಟ್ಟಿಯಂತೆ ಬಜೆಟ್ ಅಧಿವೇಶನ ಫೆಬ್ರುವರಿ 3ಕ್ಕೆ ಆರಂಭವಾಗಲಿದ್ದು 5ರಂದು ಬಜೆಟ್ ಮಂಡನೆ ನಡೆಯಲಿದೆ. ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಸುತ್ತಿರುವ ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವುದು ಅವರ ದೆಹಲಿ ಭೇಟಿಯ ಉದ್ದೇಶ ಎಂದು ಪಕ್ಷದ ಮುಖಂಡರು ಹೇಳಿದರು.
‘ಅಶಾಂತಿ ಸೃಷ್ಟಿಸುವ ಪ್ರಯತ್ನ’
ಮುಂಬರುವ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಎಚ್ಚರಿಸಿರುವ ಮಮತಾ ಬ್ಯಾನರ್ಜಿ ಶಾಂತಿ ಕಾಪಾಡುವಂತೆ ಮತ್ತು ಪ್ರಚೋದನೆಗೆ ಬಲಿಯಾಗದಂತೆ ಜನರನ್ನು ಒತ್ತಾಯಿಸಿದ್ದಾರೆ. ‘ಕೆಲವರು ಚುನಾವಣಾ ಲಾಭಕ್ಕಾಗಿ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು 365 ದಿನವೂ ಒಟ್ಟಾಗಿ ಬದುಕಬೇಕಿರುವುದರಿಂದ ಯಾರೂ ಪ್ರಚೋದನೆಗೆ ಒಳಗಾಗಬಾರದು. ಈ ಬಂಗಾಳ ಎಲ್ಲರಿಗೂ ಸೇರಿದೆ’ ಎಂದು ಮಂಗಳವಾರ ಹೇಳಿದರು. ‘ಹೊರ ರಾಜ್ಯಗಳ ಸುಮಾರು 1.5 ಕೋಟಿ ಜನರು ಬಂಗಾಳದಲ್ಲಿ ಕೆಲಸ ಮಾಡುತ್ತಿದ್ದು ಅವರಿಗೆ ಇಲ್ಲಿ ಯಾವುದೇ ತೊಂದರೆ ಕೊಡುವುದಿಲ್ಲ. ಆದರೆ ನಮ್ಮ ಕಾರ್ಮಿಕರು ರಾಜ್ಯದ ಹೊರಗೆ ಕೆಲಸಕ್ಕೆ ಹೋದಾಗ ತೀವ್ರ ದೌರ್ಜನ್ಯಕ್ಕೆ ಒಳಗಾಗುತ್ತಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.