ADVERTISEMENT

ಪರಿಷತ್‌ ಚುನಾವಣೆ: ಶಿವಸೇನಾ, ಎನ್‌ಸಿಪಿಗೆ ತಲಾ 2, ಬಿಜೆಪಿಗೆ 4 ಸ್ಥಾನ

ಪಿಟಿಐ
Published 20 ಜೂನ್ 2022, 20:29 IST
Last Updated 20 ಜೂನ್ 2022, 20:29 IST
   

ಮುಂಬೈ:ಮಹಾರಾಷ್ಟ್ರ ವಿಧಾನ ಪರಿಷತ್ತಿನ 10 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿಆಡಳಿತಾರೂಢ ಮಿತ್ರ ಪಕ್ಷಗಳಾದ ಎನ್‌ಸಿಪಿ ಮತ್ತು ಶಿವಸೇನಾಗಳು ತಲಾ ಎರಡು ಸ್ಥಾನಗಳನ್ನು ಗಳಿಸಿದ್ದರೆ, ವಿರೋಧ ಪಕ್ಷವಾದ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದಕೊಂಡಿದೆ.

ಈ ಎಲ್ಲಾ ಎಂಟು ಅಭ್ಯರ್ಥಿಗಳು ಗೆಲುವಿಗೆ ಅಗತ್ಯವಾಗಿ ಬೇಕಾಗಿದ್ದ 26 ಮತಗಳನ್ನು ಮೊದಲ ಪ್ರಾಶಸ್ತ್ರದ ಮತದಲ್ಲೇ ಗಳಿಸಿಕೊಂಡರು. ಆದರೆ ಆಡಳಿತಾರೂಢ ಪಕ್ಷದ ಭಾಗವಾದ ಕಾಂಗ್ರೆಸ್‌ನ ಇಬ್ಬರು ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸಲು ವಿಫಲರಾದರು. ಎಲ್ಲಾ ಮತಗಳ ಎಣಿಕೆ ಬಳಿಕ ಅಂತಿಮ ಫಲಿತಾಂಶ ಹೊರಬೀಳಲಿದೆ. ಬಿಜೆಪಿ ಐವರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

ಸೋಮವಾರ ಬೆಳಿಗ್ಗೆ9ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ರಾತ್ರಿ 11 ಗಂಟೆ ಮೊದಲ ಫಲಿತಾಂಶ ಹೊರಬಿತ್ತು.

ADVERTISEMENT

ಬಿಜೆಪಿ ಇಬ್ಬರು ಶಾಸಕರು ಅನಾರೋಗ್ಯದಿಂದಾಗಿ ಸಹಾಯಕರ ನೆರವಿನಿಂದ ಮತ ಚಲಾಯಿಸಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತು. ಇವರ ಮತಗಳನ್ನು ತಿರಸ್ಕರಿಸುವಂತೆ ಒತ್ತಡ ಹೇರಿತು. ಇದರಿಂದ ಮತ ಎಣಿಕೆ ಎರಡು ತಾಸು ವಿಳಂಬವಾಗಿ ಶುರುವಾಯಿತು. 10 ಸ್ಥಾನಗಳಿಗೆ ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದರು.

ಬಿಡುಗಡೆ ಕೋರಿದ್ದ ಅರ್ಜಿ ತಿರಸ್ಕೃತ:

ಜೈಲಿನಲ್ಲಿರುವ ಎನ್‌ಸಿಪಿಯ ಶಾಸಕ ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅವರಿಗೆವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವ ಸಲುವಾಗಿ ಜೈಲಿನಿಂದ ತಾತ್ಕಾಲಿಕ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಸಿ.ಟಿ. ರವಿಕುಮಾರ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ರಜಾ ಕಾಲದ ಪೀಠವು, ಪ್ರಕರಣ ಸಂಬಂಧ ಮಹಾರಾಷ್ಟ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿಗೊಳಿಸಿತು. ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 62 (5)ರ ವ್ಯಾಖ್ಯಾನಕ್ಕೆ ಸಂಬಂಧಿಸಿದ ಸಮಸ್ಯೆ ಪರಿಶೀಲಿಸಲು ಒಪ್ಪಿಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.