ಪ್ರಯಾಗ್ ರಾಜ್(ಉತ್ತರ ಪ್ರದೇಶ): 2022ರ ದ್ವೇಷ ಭಾಷಣ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಅವರ ಮಗ ಅಬ್ಬಾಸ್ ಅನ್ಸಾರಿ ಅವರ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಬುಧವಾರ ವಜಾ ಮಾಡಿದೆ.
2 ವರ್ಷ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದ್ದ ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿ ಸಮೀರ್ ಜೈನ್ ರದ್ದು ಮಾಡಿದ್ದಾರೆ.
2002 ಮೇ 31ರ ಚುನಾವಣಾ ಪ್ರಚಾರದ ವೇಳೆ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಮೌನಲ್ಲಿರುವ ವಿಶೇಷ ನ್ಯಾಯಾಲಯ ಅನ್ಸಾರಿಗೆ ಶಿಕ್ಷೆ ವಿಧಿಸಿತ್ತು. ಶಿಕ್ಷೆ ರದ್ದು ಕೋರಿ ಅಬ್ಬಾಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಐಪಿಸಿಯ ಸೆಕ್ಷನ್ 153-ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 189 (ಸರ್ಕಾರಿ ಅಧಿಕಾರಿಗೆ ಘಾಸಿ ಮಾಡುವ ಬೆದರಿಕೆ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಮತ್ತು ಸೆಕ್ಷನ್ 171ಎಫ್ (ಚುನಾವಣೆಯಲ್ಲಿ ಅನಗತ್ಯ ಪ್ರಭಾವ ) ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿತ್ತು.
ದ್ವೇಷ ಭಾಷಣದ ಸಮಯದಲ್ಲಿ ವೇದಿಕೆಯಲ್ಲಿದ್ದ ಅಬ್ಬಾಸ್ ಅವರ ಚುನಾವಣಾ ಏಜೆಂಟ್ ಮನ್ಸೂರ್ ಅನ್ಸಾರಿ ಅವರನ್ನೂ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಮೌ ಸದರ್ ವಿಧಾನಸಭಾ ಕ್ಷೇತ್ರದ ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಆಗಿನ ಶಾಸಕರಾಗಿದ್ದ ಅಬ್ಬಾಸ್ ಅನ್ಸಾರಿ, 2022ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಪರಿಣಾಮ ಎದುರಿಸುತ್ತೀರಿ ಎಂದು ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.