ADVERTISEMENT

ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿ: ಯುಜಿಸಿ

ಪಿಟಿಐ
Published 19 ಏಪ್ರಿಲ್ 2023, 16:29 IST
Last Updated 19 ಏಪ್ರಿಲ್ 2023, 16:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಯಾವುದೇ ಕೋರ್ಸ್ ಇಂಗ್ಲಿಷ್ ಮಾಧ್ಯಮದಲ್ಲಿದ್ದರೂ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದೆ.

‘ಮಾತೃಭಾಷೆ ಅಥವಾ ಸ್ಥಳೀಯ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಬರೆಯುವುದು ಮತ್ತು ಇತರ ಭಾಷೆಗಳಿಂದ ಪುಸ್ತಕಗಳನ್ನು ಭಾಷಾಂತರಿಸುವುದು ಸೇರಿದಂತೆ ಬೋಧನೆಯಲ್ಲಿ ಅವುಗಳ ಬಳಕೆಯನ್ನು ಉತ್ತೇಜಿಸುವ ಕ್ರಮಗಳನ್ನು ಪ್ರೋತ್ಸಾಹಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಬೋಧನೆ ಮತ್ತು ಕಲಿಕೆಯಲ್ಲಿ ಸ್ಥಳೀಯ ಭಾಷೆಯನ್ನು ಬಳಸುವಂತೆ ಉತ್ತೇಜಿಸುವ ಪ್ರಕ್ರಿಯೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ.

‘ಯಾವುದೇ ಕೋರ್ಸ್ ಇಂಗ್ಲಿಷ್ ಮಾಧ್ಯಮದಲ್ಲಿದ್ದರೂ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಸ್ಥಳೀಯ ಭಾಷೆಯಲ್ಲೇ ಉತ್ತರ ಬರೆಯಲು ನಿಮ್ಮ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ನೀಡಬೇಕು. ಅಂತೆಯೇ ಇದನ್ನು ಉತ್ತೇಜಿಸಲು ಬೋಧನೆ– ಕಲಿಕೆಯಲ್ಲಿ ಸ್ಥಳೀಯ ಭಾಷೆಯನ್ನು ಬಳಸಬೇಕು ಎಂದು ಯುಜಿಸಿಯು ವಿನಂತಿಸುತ್ತದೆ. ವಿದ್ಯಾರ್ಥಿಗಳು ಉತ್ತರಗಳನ್ನು ಸುಲಭವಾಗಿ ಬರೆಯಲು ಅವಕಾಶ ನೀಡುವುದು ಇದರ ಹಿಂದಿರುವ ಉದ್ದೇಶ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ನಿಯಮಿತ ಬಳಕೆ ಮತ್ತು ಪ್ರಚಾರವನ್ನು ಕೇಂದ್ರೀಕರಿಸುವ ಪ್ರಮುಖ ಅಂಶವನ್ನೊಳನೊಳಗೊಂಡಿದೆ. ಉತ್ತಮ ಅರಿವಿನ ಸಾಧನೆಗಾಗಿ ಮತ್ತು ಕಲಿಯುವವರ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗಾಗಿ ಎಲ್ಲಾ ಭಾರತೀಯ ಭಾಷೆಗಳಲ್ಲಿ ಸಂವಹನವನ್ನು ಉತ್ತಮಗೊಳಿಸುವ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ’ ಎಂದು ಯುಜಿಸಿ ಅಧ್ಯಕ್ಷರು ಹೇಳಿದ್ದಾರೆ.

‘ಶೈಕ್ಷಣಿಕ ಪರಿಸರ ವ್ಯವಸ್ಥೆಯು ಇಂಗ್ಲಿಷ್ ಮಾಧ್ಯಮ ಕೇಂದ್ರಿತವಾಗಿ ಮುಂದುವರಿಯುತ್ತದೆ. ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯು ಸ್ಥಳೀಯ ಭಾಷೆಗಳಲ್ಲಿ ನಡೆದರೆ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯ ಪ್ರಮಾಣ ಕ್ರಮೇಣ ಹೆಚ್ಚಾಗುತ್ತದೆ. ಇದರಿಂದಾಗಿ ಯಶಸ್ಸಿನ ದರವು ಹೆಚ್ಚಳವಾಗುತ್ತದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿದ್ಯಾರ್ಥಿಗಳು ಸ್ಥಳೀಯ ಭಾಷೆಗಳಲ್ಲಿ ಬರೆದ ಉತ್ತರವನ್ನು ಹೇಗೆ ಮೌಲ್ಯಮಾಪನ ಮಾಡಲಾಗುವುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ಮೌಲ್ಯಮಾಪಕರೂ ಸ್ಥಳೀಯ ಭಾಷೆಯನ್ನು ಅರಿತಿದ್ದರೆ ಇದು ಸಾಧ್ಯವಾಗುತ್ತದೆ. ಸ್ಥಳೀಯ ಭಾಷೆ ತಿಳಿದಿರುವ ಮೌಲ್ಯಮಾಪಕರನ್ನು ಹುಡುಕುವ ಪ್ರಯತ್ನವನ್ನು ವಿಶ್ವವಿದ್ಯಾಲಯ ಮಾಡಬಹುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.