ADVERTISEMENT

ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಒಬ್ಬ ದೇಶಭಕ್ತ: ಬಿಜೆಪಿ

ಪಿಟಿಐ
Published 20 ಅಕ್ಟೋಬರ್ 2021, 12:46 IST
Last Updated 20 ಅಕ್ಟೋಬರ್ 2021, 12:46 IST
ಅಮರಿಂದರ್‌ ಸಿಂಗ್‌
ಅಮರಿಂದರ್‌ ಸಿಂಗ್‌   

ನವದೆಹಲಿ: ‘ಅಮರಿಂದರ್‌ ಸಿಂಗ್ ಒಬ್ಬ ದೇಶಭಕ್ತ. ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಮುಕ್ತ ಮನಸ್ಸು ಹೊಂದಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್ ಉಸ್ತುವಾರಿ ದುಷ್ಯಂತ್ ಗೌತಮ್ ಬುಧವಾರ ಹೇಳಿದರು.

ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ಸಿಂಗ್‌ ಘೋಷಿಸಿದ ಮರು ದಿನವೇ ಬಿಜೆಪಿ ನಾಯಕರು ಈ ಹೇಳಿಕೆ ನೀಡಿದ್ದಾರೆ.

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಸಿಂಗ್ ಅವರು, ‘ಶೀಘ್ರದಲ್ಲೇ ತಮ್ಮದೇ ರಾಜಕೀಯ ಪಕ್ಷ ಸ್ಥಾಪಿಸುತ್ತೇನೆ. ರೈತರ ಹಿತದೃಷ್ಟಿಯಿಂದ ರೈತರ ಸಮಸ್ಯೆಯನ್ನು ಬಗೆಹರಿಸಿದರೆ ಬಿಜೆಪಿಯೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧ’ ಎಂದು ಮಂಗಳವಾರ ಘೋಷಿಸಿದ್ದರು.

ADVERTISEMENT

‘ಸಿಂಗ್‌ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ನಾವೂ ಅದಕ್ಕೆ ಬದ್ಧರಾಗಿದ್ದೇವೆ. ರೈತರ ಹಿತಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಸಮಯ ಬಂದರೆ ಇಬ್ಬರೂ ಒಟ್ಟಿಗೆ ಕುಳಿತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇವೆ’ ಎಂದು ಗೌತಮ್ ತಿಳಿಸಿದರು.

‘ನಮ್ಮ ಪ್ರಮುಖ ಕಾರ್ಯಸೂಚಿ ರಾಷ್ಟ್ರೀಯತೆ. ರಾಷ್ಟ್ರವೇ ನಮಗೆ ಮೊದಲು. ಈ ಕಾರ್ಯಸೂಚಿಯಲ್ಲಿ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಯಸುವ ಎಲ್ಲ ಪಕ್ಷಗಳನ್ನೂ ಸ್ವಾಗತಿಸುತ್ತೇವೆ’ ಎಂದು ಅವರು ಹೇಳಿದರು.

‘ಅಮರಿಂದರ್ ಸಿಂಗ್ ಸೈನಿಕರಾಗಿದ್ದವರು. ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಅವರ ನಿಲುವನ್ನು ಪ್ರಶಂಸಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.