ADVERTISEMENT

ಕೋವಿಡ್‌: ದೆಹಲಿಯಲ್ಲಿ 200 ಶವಗಳನ್ನು ಸಾಗಿಸಿದ್ದ ಆಂಬುಲೆನ್ಸ್‌ ಚಾಲಕ ಖಾನ್‌ ನಿಧನ

ಏಜೆನ್ಸೀಸ್
Published 12 ಅಕ್ಟೋಬರ್ 2020, 8:58 IST
Last Updated 12 ಅಕ್ಟೋಬರ್ 2020, 8:58 IST
ಆರಿಫ್‌ ಖಾನ್‌ ( ಎಡದಿಂದ ಎರಡನೇಯವರು)
ಆರಿಫ್‌ ಖಾನ್‌ ( ಎಡದಿಂದ ಎರಡನೇಯವರು)   

ನವದೆಹಲಿ: ಕೋವಿಡ್‌–19ನಿಂದ ಮೃತಪಟ್ಟಿದ್ದ 200ಕ್ಕೂ ಹೆಚ್ಚು ಮೃತದೇಹಗಳನ್ನು ಅಂತ್ಯಕ್ರಿಯೆ ಸ್ಥಳಗಳಿಗೆ ಸಾಗಿಸಿದ್ದ ಆಂಬುಲೆನ್ಸ್‌ ಚಾಲಕಆರಿಫ್‌ ಖಾನ್‌ ನಿಧನರಾಗಿದ್ದಾರೆ.

ಕಳೆದ ಮಾರ್ಚ್‌ ತಿಂಗಳಿಂದ ಕೋವಿಡ್‌ ಸೋಂಕಿತರನ್ನು ಆಸ್ಪತ್ರೆಗಳಿಗೆ ಸಾಗಿಸುವುದು ಮತ್ತು ಮೃತ ದೇಹಗಳನ್ನು ಅಂತ್ಯಸಂಸ್ಕಾರ ಮಾಡುವ ಕೆಲಸದಲ್ಲಿ ಆರಿಫ್‌ ಖಾನ್‌ ನಿರತರಾಗಿದ್ದರು.

ಆರಿಫ್‌ ಖಾನ್‌ಗೆ ಸೋಂಕು ದೃಢಪಟ್ಟಿತ್ತು. ಹಿಂದೂ ರಾವ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಮೃತಪಟ್ಟಿದ್ದಾರೆ. ಪತ್ನಿ ಹಾಗೂ 4 ಮಕ್ಕಳನ್ನು ಅಗಲಿದ್ದಾರೆ. ಆರೋಗ್ಯ ಸೇವೆಯಲ್ಲೇ ನಿರತರಾಗಿದ್ದ ಖಾನ್‌ ಕಳೆದ 3 ತಿಂಗಳಿಂದ ಮನೆಗೆ ಹೋಗಿರಲಿಲ್ಲ. ಫೋನಿನಲ್ಲಿ ಮಕ್ಕಳು ಮತ್ತು ಪತ್ನಿಯ ಜೊತೆ ಸಂಪರ್ಕದಲ್ಲಿ ಇದ್ದರು. ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ.

ADVERTISEMENT

ಕೊರೊನಾ ವಾರಿಯರ್‌ ಆಗಿ ಹಲವರ ಪ್ರಾಣ ಉಳಿಸಿದ್ದ ಆರಿಫ್‌ ಖಾನ್‌ನನ್ನು ದೇವರು ರಕ್ಷಿಸಲಿಲ್ಲ, ಒಂದೇ ಒಂದು ನಿಮಿಷ ಮಾತ್ರ ಅವರ ಮುಖ ನೋಡಲು ಸಾಧ್ಯವಾಯಿತು ಎಂದು ಅವರ ಪತ್ನಿ ನೊಂದು ಹೇಳಿದ್ದಾರೆ.

ದೆಹಲಿಯಲ್ಲಿ ಉಚಿತವಾಗಿ ಆಂಬುಲೆನ್ಸ್‌ ಸೇವೆ ನೀಡುತ್ತಿರುವ ಶಾಹೀದ್‌ ಭಗತ್‌ ಸಿಂಗ್‌ ಸೇವಾದಳ ಸಂಸ್ಥೆಯಲ್ಲಿ ಖಾನ್‌ ಆಂಬುಲೆನ್ಸ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇದೇ ಸಂಸ್ಥೆ ಕೋವಿಡ್‌ನಿಂದ ಮೃತಪಟ್ಟ 500ಕ್ಕೂ ಹೆಚ್ಚು ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಿದೆ.

ಆರೀಪ್‌ ಖಾನ್‌ ಉತ್ತಮ ಕೆಲಸಗಾರರಾಗಿದ್ದರು. ಅವರ ಸಾವಿನಿಂದ ನಮ್ಮ ಸಂಸ್ಥೆಯಲ್ಲಿ ಶೂನ್ಯ ಆವರಿಸಿದೆ ಎಂದು ಸೇವಾದಳ ಅಧ್ಯಕ್ಷ ಜಿತೇಂದೆರ್‌ ಸಿಂಗ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸೇವೆಗೆ ಸದಾ ಲಭ್ಯವಾಗಿರಬೇಕು ಎಂಬ ಕಾರಣಕ್ಕೆ ಮಡದಿ, ಮಕ್ಕಳನ್ನು ಬಿಟ್ಟು ಸಂಸ್ಥೆಯ ಕಚೇರಿಯಲ್ಲೇ ಉಳಿದುಕೊಂಡಿದ್ದರು.ಕಳೆದ ಅಕ್ಟೋಬರ್‌ 1ರಂದು ಅವರಿಗೆ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಶುಕ್ರವಾರ ಅವರ ಆರೋಗ್ಯ ವಿಚಾರಿಸಿದ್ದೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟರು ಎಂದು ಸಿಂಗ್‌ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.