ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳದ ಮಧ್ಯೆ, ಹದಿನೈದು ದಿನಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ಸುಮಾರು ಎರಡು ಪಟ್ಟು ಹೆಚ್ಚಳ ಕಂಡುಬಂದಿದೆ. ಇದರಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಇರುವವರ ಸಂಖ್ಯೆ ಹೆಚ್ಚಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ, ಮಾಸ್ಕ್ ಹಾಕುವುದು ಮತ್ತು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ರೋಗಿಗಳಿಗಾಗಿ ದೆಹಲಿಯಲ್ಲಿ ಲಭ್ಯವಿರುವ 9,405 ಹಾಸಿಗೆಗಳ ಪೈಕಿ ಆಗಸ್ಟ್ 1ರ ಹೊತ್ತಿಗೆ 307(ಶೇಕಡ 3.26), ಆಗಸ್ಟ್ 2ಕ್ಕೆ ಈ ಪ್ರಮಾಣ ಶೇಕಡ 3.75ಕ್ಕೆ ಏರಿತ್ತು. ಬಳಿಕ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರುತ್ತಲೇ ಇದ್ದು, ಆಗಸ್ಟ್ 16ರ ಹೊತ್ತಿಗೆ ಶೇಕಡ 6.24ರಷ್ಟು ಹಾಸಿಗೆಗಳು ಭರ್ತಿಯಾಗಿವೆ.
ಆಗಸ್ಟ್ 6ಕ್ಕೆ ಶೇಕಡ 5ರಷ್ಟಿದ್ದ ಹಾಸಿಗೆಗಳ ಭರ್ತಿ ಪ್ರಮಾಣ, ಆಗಸ್ಟ್ 11ರ ಹೊತ್ತಿಗೆ ಶೇಕಡ 5.97ಕ್ಕೆ ಏರಿತ್ತು. ಆಗಸ್ಟ್ 12ಕ್ಕೆ ಶೇಕಡ 6.13 ರಷ್ಟಾಗಿತ್ತು. ಆದರೆ, ಆಗಸ್ಟ್ 13ಕ್ಕೆ ಭಾಗಶಃ ಕಡಿಮೆಯಾಗಿ ಶೇಕಡ 5.99ಕ್ಕೆ ಬಂದಿತ್ತು. ಆದರೆ, ಆ ಬಳಿಕ ಪತ್ತೆ ಏರುಗತಿಯಲ್ಲಿ ಸಾಗಿದೆ.
ವೈರಲ್ ಸೋಂಕಿನ ಪರಿಣಾಮ ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕ್ರಮೇಣ ಹೆಚ್ಚಿದೆ ಎಂದು ಫೋರ್ಟಿಸ್ ಆಸ್ಪತ್ರೆ ನಿರ್ದೇಶಗ ಡಾ ವಿಕಾಸ್ ಮೌರ್ಯ ತಿಳಿಸಿದ್ದಾರೆ.
‘ಆಸ್ಪತ್ರೆಗೆ ದಾಖಲಾಗುತ್ತಿರುವವರ ಪೈಕಿ ಹಲವರು ಗಂಭೀರ ಆರೋಗ್ಯ ಸಮಸ್ಯೆ ಮತ್ತು ಲಸಿಕೆ ಹಾಕಿಸಿಕೊಳ್ಳದವರಾಗಿದ್ದಾರೆ. ಕೆಲವರಿಗೆ ಶ್ವಾಸಕೋಶದ ಸಮಸ್ಯೆ ಇದ್ದು, ಅವರಿಗೆ ಆ್ಯಂಟಿ–ವೈರಲ್ ಚಿಕಿತ್ಸೆಯ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರ ನಡೆಸುತ್ತಿರುವ ಎನ್‌ಎನ್‌ಜೆಪಿ ಆಸ್ಪತ್ರೆ ನಿರ್ದೇಶಕ ಡಾ. ಸುರೇಶ್ ಕುಮಾರ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಕಳೆದ ಒಂದು ವಾರದ ಆಸುಪಾಸಿನಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಈ ಹಿಂದೆ ದಿನ್ಕೆ 4ರಿಂದ 5 ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಈಗ ಆ ಸಂಖ್ಯೆ 8ರಿಂದ 10ಕ್ಕೆ ಏರಿದೆ’ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಕ್ಯೆ ಏರಿಕೆ ಎಚ್ಚರಿಕೆ ಗಂಟೆಯಾಗಿದೆ ಎಂದು ಮಂಗಳವಾರ ದೆಹಲಿ ಸರ್ಕಾರ ಹೇಳಿತ್ತು.
ರಾಜ್ಯದ ಎಲ್ಲ ಜನರು ಕೋವಿಡ್ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆಯುವಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನವಿ ಮಾಡಿದ್ದರು.
‘ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್ ರೋಗಿಗಳ ಪೈಕಿ ಶೇಕಡ 90ರಷ್ಟು ಮಂದಿ ಎರಡು ಡೋಸ್ ಲಸಿಕೆ ಪಡೆದವರಾಗಿದ್ದಾರೆ. 3ನೇ ಡೋಸ್ ಪಡೆದ ಶೇಕಡ 10ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದಾಗಿ, ಮುನ್ನೆಚ್ಚರಿಕೆ ಡೋಸ್ ರಕ್ಷಣೆ ಒದಗಿಸುತ್ತದೆ ಎಂಬುದು ಸಾಬೀತಾಗಿದೆ’ಎಂದು ಅವರು ಹೇಳಿದ್ಧಾರೆ.
ದೆಹಲಿಯಲ್ಲಿ ಮಂಗಳವಾರ ಹೊಸದಾಗಿ 917 ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ದಿನದ ಪಾಸಿಟಿವಿಟಿ ದರ ಶೇಕಡ 19.20ಕ್ಕೆ ಏರಿತ್ತು. ಇದು ಕಳೆದ 200 ದಿನಗಳಲ್ಲೇ ಅತ್ಯಧಿಕವಾಗಿತ್ತು. ಮೂವರು ಕೋವಿಡ್ ರೋಗಿಗಳು ಸಾವಿಗೀಡಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.