ADVERTISEMENT

ದೆಹಲಿಯಲ್ಲಿ ಸತತ ಗುಂಡಿನ ದಾಳಿ: ಅಮಿತ್ ಶಾ ರಾಜೀನಾಮೆಗೆ ಟ್ವಿಟ್ಟರ್‌ನಲ್ಲಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 4:05 IST
Last Updated 3 ಫೆಬ್ರುವರಿ 2020, 4:05 IST
ಅಮಿತ್‌ ಶಾ
ಅಮಿತ್‌ ಶಾ   

ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಬಳಿ ಐದು ದಿನಗಳಲ್ಲಿಯೇ ಮೂರು ಬಾರಿ ಗುಂಡಿನ ದಾಳಿ ನಡೆದಿದ್ದು, ರಕ್ಷಣೆ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜನ ಗೃಹ ಸಚಿವ ಅಮಿತ್ ಶಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಅಮಿತ್‌ ಶಾ ಅವರು ರಾಜೀನಾಮೆ ನೀಡಲೇಬೇಕು ಎನ್ನುವ ವಿಷಯ ಈಗ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿದೆ. #AmitShahMustResign ಎಂಬ ಟ್ಯಾಗ್‌ನಲ್ಲಿ ಸುಮಾರು 5 ಸಾವಿರ ಮಂದಿ ಟ್ವೀಟ್‌ ಮಾಡಿ, ರಾಜೀನಾಮೆಗೆ ಒತ್ತಾಯಿಸಿದ್ದಾರೆ.

‘ಜಾಮಿಯಾ ಪ್ರತಿಭಟನೆಯಲ್ಲಿ ನಡೆದ ಪೊಲೀಸ್‌ ಹಿಂಸಾಚಾರ ಹಾಗೂಗುಂಡಿನ ದಾಳಿ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ, ಜೆಎನ್‌ಯುಗೆ ನುಗ್ಗಿದ ಮುಸುಕುಧಾರಿಗಳ ವಿರುದ್ಧವೂ ಕ್ರಮ ಕೈಗೊಂಡಿಲ್ಲ, ಪ್ರಚೋದನಕಾರಿ ಭಾಷಣ ಮಾಡಿದ ಅನುರಾಗ್‌ ಠಾಕೂರ್‌, ಯೋಗಿ ಆದಿತ್ಯನಾಥ್‌ ಅವರ ಮೇಲೂ ಶಿಸ್ತುಕ್ರಮ ಕೈಗೊಂಡಿಲ್ಲ... ಇದನೆಲ್ಲ ನೋಡಿದರೆ ಇದಕ್ಕೆ ಯಾರು ಬೆಂಬಲಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ’ ಎಂದು ಪ್ರತೀಕ್ ಜಾದವ್‌, ಅಮಿತ್‌ ಶಾ ರಾಜೀನಾಮೆ ನೀಡಿ ಎನ್ನುವ ಟ್ಯಾಗ್‌ ಬಳಸಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ದೆಹಲಿಯಲ್ಲಿ ಕೆಲವು ಭಯೋತ್ಪಾದಕರು ಬಹಿರಂಗವಾಗಿ ಗುಂಡು ಹಾರಿಸುತ್ತಿದ್ದಾರೆ. ಇದನ್ನು ಸರಿಯಾಗಿ ನಿಭಾಯಿಸುವಲ್ಲಿ ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ. ತಮ್ಮ ಜವಾಬ್ದಾರಿ ಪೂರೈಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡುವುದೇ ಸರಿ’ ಎಂದು ನದೀಂ ರಾಮ್‌ ಅಲಿ ಟ್ವೀಟ್‌ ಮಾಡಿದ್ದಾರೆ.

ಜಾಮಿಯಾ ಶೂಟರ್‌ ಮತ್ತು ಅಮಿತ್‌ ಶಾ ಫೋಟೊ ಪ್ರಕಟಿಸಿ, ಮೊದಲ ಚಿತ್ರದಲ್ಲಿ ಕಾಣುತ್ತಿರುವುದು ಕಲೆ, ಎರಡನೆಯದರಲ್ಲಿರುವುದು ಕಲಾವಿದ.. ‘ನಿಜವಾದ ಹೋರಾಟ ನಡೆಯುತ್ತಿರುವುದು ಮೋದಿ ಕಲ್ಪನೆಯ ಹಿಂದುತ್ವ ಮತ್ತು ಗಾಂಧಿ ಕಲ್ಪನೆಯ ಹಿಂದೂ ಧರ್ಮದ ನಡುವೆ’ ಎಂದು ತೌಫಿಕ್‌ ಟ್ವೀಟಿಸಿದ್ದಾರೆ.

‘ಗುಂಡಿನ ದಾಳಿಗಳ ನಂತರ ಜಾಮಿಯಾ ಎದುರು ನಡೆಯುತ್ತಿರುವ ಪ್ರತಿಭಟನೆ ಇನ್ನೂ ತೀವ್ರವಾಗುತ್ತಿದೆ. ಅಮಿತ್‌ ಶಾ ಅವರೇ ನೀವು ಗೃಹ ಸಚಿವರಾದ ಮೇಲೆ ದೆಹಲಿಯಲ್ಲಿ ನಡೆಯುತ್ತಿರುವ ಈ ಹಿಂಸಾಚಾರಗಳು ಹಿಂದೆಂದೂ ನಡೆದಿರಲಿಲ್ಲ’ ಎಂದು ಅಜೆಯ್‌ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.