ಕಾಶ್ಮೀರಕ್ಕೆ ಬುಧವಾರ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ, ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಬಂಧಿಕರು ಭೇಟಿಯಾಗಿ ಸಾಂತ್ವನ ಹೇಳಿದರು –ಪಿಟಿಐ ಚಿತ್ರ
ನವದೆಹಲಿ: ‘ಭಾರತವು ಭಯೋತ್ಪಾದನೆಗೆ ಮಣಿಯುವುದಿಲ್ಲ, ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ ಪ್ರವಾಸಿಗರನ್ನು ಹತ್ಯೆಗೈದ ಉಗ್ರರನ್ನು ಬಿಡುವುದೂ ಇಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ್ದ ಗೃಹ ಸಚಿವರು, ಸೇನೆ ಮತ್ತು ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳಿಂದ ವಸ್ತುಸ್ಥಿತಿಯ ಮಾಹಿತಿ ಪಡೆದರು.
ಮಂಗಳವಾರ ದಾಳಿಯಲ್ಲಿ ಅಸುನೀಗಿದವರ ಮೃತದೇಹಗಳಿಗೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದ ಅವರು, ‘ಎಕ್ಸ್’ ಜಾಲತಾಣದ ಮೂಲಕ, ‘ಭಾರತ ಭಯೋತ್ಪಾದನೆ ಕೃತ್ಯಗಳಿಗೆ ಮಣಿಯುವುದಿಲ್ಲ’ ಎಂದು ಸ್ಪಷ್ಟ ನಿಲುವು ಪ್ರಕಟಿಸಿದರು.
ದಕ್ಷಿಣ ಕಾಶ್ಮೀರದ ಪ್ರವಾಸಿತಾಣ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದ ಬಂದೂಕುಧಾರಿ ಉಗ್ರರು, ಪುರುಷ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ನಡೆಸಿದ್ದರು.
ಉಗ್ರರು ದಾಳಿ ನಡೆಸಿದ್ದ ಸ್ಥಳ, ಬೈಸರನ್ ಕಣಿವೆ ಪ್ರದೇಶದಕ್ಕೆ ಬೆಳಿಗ್ಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಶಾ ಅವರಿಗೆ ಸೇನೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕೃತ್ಯ, ನಂತರದ ಪರಿಸ್ಥಿತಿ ಕುರಿತು ವಿವರಣೆ ನೀಡಿದರು.
ಉಗ್ರರು ಪ್ರವಾಸಿ ತಾಣ ತಲುಪಲು ಬಳಸಿರಬಹುದಾದ ಸಂಭವನೀಯ ಮಾರ್ಗ ಕುರಿತು ವಿವರಿಸಿದರು. ಗೃಹ ಸಚಿವರು ಹೆಲಿಕಾಪ್ಟರ್‌ನಲ್ಲಿ ಸ್ಥಳದ ವೈಮಾನಿಕ ಸಮೀಕ್ಷೆಯನ್ನು ಮಾಡಿದರು.
ಬಳಿಕ ಅನಂತನಾಗ್ ಜಿಲ್ಲೆಯ ಸರ್ಕಾರಿ ವೈದ್ಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಗಾಯಾಳುಗಳನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಗೃಹ ಸಚಿವರ ಜೊತೆಗೆ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಡಿಜಿ ನಳಿನ್ ಪ್ರಭಾತ್, ಸೇನೆಯ ಹಿರಿಯ ಅಧಿಕಾರಿ ಲೆಫ್ಟಿನಂಟ್ ಜನರಲ್ ಪ್ರಶಾಂತ್ ಶ್ರೀವಾತ್ಸವ ಅವರು ಇದ್ದರು. ಭದ್ರತಾ ವ್ಯವಸ್ಥೆ ಕುರಿತ ಪರಿಶೀಲನಾ ಸಭೆಯಲ್ಲಿ ಈ ಎಲ್ಲರೂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.