ADVERTISEMENT

ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಶಾ ಹೇಳಿಕೆ: ಮಾಜಿ ನ್ಯಾಯಮೂರ್ತಿಗಳಿಂದ ಟೀಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 13:32 IST
Last Updated 25 ಆಗಸ್ಟ್ 2025, 13:32 IST
ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ
ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ   

ನವದೆಹಲಿ: ಸಲ್ವಾ ಜುಡುಮ್‌ ಕುರಿತ ತೀರ್ಪು ವಿಚಾರವಾಗಿ ಉಪರಾಷ್ಟ್ರಪತಿ ಚುನಾವಣೆಯ ವಿಪಕ್ಷಗಳ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿರುವುದು ದುರದೃಷ್ಟಕರ ಎಂದು ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರ ಗುಂಪು ಟೀಕಿಸಿದೆ.

‘ಈ ರೀತಿಯ ಹಾನಿಕಾರಕ ಹೇಳಿಕೆಗಳು ಹಾಲಿ ನ್ಯಾಯಮೂರ್ತಿಗಳ ಮೇಲೆ ಭಯಾನಕವಾದ ಪರಿಣಾಮ ಬೀರಲಿವೆ’ ಎಂದು ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ನ 18 ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಇಬ್ಬರು ಕಾನೂನು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆಯ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಅಭ್ಯರ್ಥಿ, ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ ರೆಡ್ಡಿ ಅವರನ್ನು ಬೆಂಬಲಿಸಿ ಹೇಳಿಕೆ ಬಿಡುಗಡೆ ಮಾಡಿರುವ ಈ ಗುಂಪು, ಶಾ ವಿರುದ್ಧ ಟೀಕಾ ಪ್ರಹಾರ ಮಾಡಿದೆ.

ADVERTISEMENT

‘ಉಪ ರಾಷ್ಟ್ರಪತಿ ಚುನಾವಣೆ ಕುರಿತ ಪ್ರಚಾರವನ್ನು ಘನತೆ ಹಾಗೂ ಗೌರವಯುತವಾಗಿ ನಡೆಸಬೇಕು. ಎರಡೂ ಪಾಳಯದ ಅಭ್ಯರ್ಥಿಗಳು ನಂಬಿರುವ ಸಿದ್ಧಾಂತವನ್ನು ಟೀಕಿಸುವುದರಿಂದ ದೂರ ಇರಬೇಕು’ ಎಂದು ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರು ಹೇಳಿದ್ದಾರೆ.

ಈ ಹೇಳಿಕೆಗೆ ಸುಪ್ರೀಂ ಕೋರ್ಟ್‌ನ 7 ನಿವೃತ್ತ ನ್ಯಾಯಮೂರ್ತಿಗಳು, ಹೈಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳು, 8 ನ್ಯಾಯಮೂರ್ತಿಗಳು ಹಾಗೂ ಇಬ್ಬರು ಖ್ಯಾತ ಕಾನೂನು ತಜ್ಞರು ಸಹಿ ಹಾಕಿದ್ದಾರೆ.

ಈ ಹೇಳಿಕೆಗೆ ಸಹಿ ಹಾಕಿದವರ ಪೈಕಿ, ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಕ್, ಗೋಪಾಲಗೌಡ, ಕುರಿಯನ್ ಜೋಸೆಫ್‌, ಮದನ್‌ ಬಿ.ಲೋಕೂರ, ಜೆ.ಚಲಮೇಶ್ವರ, ಎಸ್‌,ಮುರಳೀಧರ, ಕೆ.ಚಂದ್ರು, ಪ್ರೊ.ಮೋಹನ್‌ ಗೋಪಾಲ್ ಹಾಗೂ ಸಂಜಯ್‌ ಹೆಗ್ಡೆ ಸೇರಿದ್ದಾರೆ.

ಕಳೆದ ಶುಕ್ರವಾರ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದಲ್ಲಿ ಸಚಿವ ಶಾ ಪಾಲ್ಗೊಂಡಿದ್ದರು. ಈ ವೇಳೆ, ‘ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿದ್ದ ಸುದರ್ಶನ ರೆಡ್ಡಿ ಅವರು ನಕ್ಸಲವಾದ ಬೆಂಬಲಿಸುತ್ತಿದ್ದರು. ಅವರು ಸಲ್ವಾ ಜುಡುಮ್ ಕುರಿತಂತೆ ತೀರ್ಪು ನೀಡದೇ ಹೋಗಿದ್ದಲ್ಲಿ, 2020ರ ವೇಳೆಗೆ ನಕ್ಸಲ್‌ ಉಗ್ರವಾದ ಕೊನೆಗೊಂಡಿರುತ್ತಿತ್ತು. ತಾವು ನಂಬಿದ್ದ ಸಿದ್ಧಾಂತದಿಂದ ಪ್ರೇರಿತರಾಗಿ ಸಲ್ವಾ ಜುಡುಮ್‌ ಕುರಿತ ತೀರ್ಪನ್ನು ಪ್ರಕಟಿಸಿದ್ದರು’ ಎಂದು ಹೇಳಿದ್ದರು.

ಕಾಂಗ್ರೆಸ್‌ ಟೀಕೆ

ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರ ಹೇಳಿಕೆ ಉಲ್ಲೇಖಿಸುವ ಮೂಲಕ ಕಾಂಗ್ರೆಸ್‌ ಪಕ್ಷವು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಟೀಕಿಸಿದೆ. ‘ಸಚಿವ ಅಮಿತ್‌ ಶಾ ಅವರನ್ನು ಬಹಿರಂಗವಾಗಿ ಟೀಕಿಸಬಲ್ಲಂತಹ ಜನರು ಭಾರತದಲ್ಲಿ ಇಂದಿಗೂ ಇದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘ನಮ್ಮ ದೇಶದ ಕೇಂದ್ರ ಗೃಹ ಸಚಿವರು ಒಂದೇ ‘ಆಯುಧ’ದಿಂದ (ಡಬ್ಲುಎಂಡಿ) ಎರಡು ರೀತಿಯ ಹಾನಿ ಮಾಡಬಲ್ಲವರಾಗಿರುವುದು ದುರದೃಷ್ಟಕರ ಸಂಗತಿ. ಒಂದು ‘ದುರುದ್ದೇಶದಿಂದ ಮಾನಹಾನಿ ಮಾಡುವ ಆಯುಧ’ವಾದರೆ ಮತ್ತೊಂದು ‘ದುರುದ್ದೇಶದಿಂದ ವಿಷಯ ತಿರುಚುವ ಆಯುಧ’ವಾಗಿದೆ. ಆದರೆ ಯಾವುದೇ ಅಳಕು ಇಲ್ಲದೆಯೇ ಅವರನ್ನು ಪ್ರಶ್ನಿಸುವ ಜನರು ಈಗಲೂ ದೇಶದಲ್ಲಿ ಇದ್ದಾರೆ’ ಎಂದು ಹೇಳಿದ್ದಾರೆ.

ಹೇಳಿಕೆಯಲ್ಲಿನ ಪ್ರಮುಖ ಅಂಶಗಳು

  • ಸಲ್ವಾ ಜುಡುಮ್‌ ಕುರಿತ ತೀರ್ಪನ್ನು ಶಾ ಅವರು ಸಾರ್ವಜನಿಕ ವೇದಿಕೆಯಲ್ಲಿ ತಪ್ಪಾಗಿ ನಿರೂಪಣೆ ಮಾಡುತ್ತಿರುವುದು ದುರದೃಷ್ಟಕರ. ನಕ್ಸಲವಾದ ಅಥವಾ ಅದಕ್ಕೆ ಸಂಬಂಧಪಟ್ಟ ಸಿದ್ಧಾಂತವನ್ನು ಈ ತೀರ್ಪು ಎಂದಿಗೂ ಸ್ಪಷ್ಟವಾಗಿ ಅಥವಾ ಸಲಹಾರೂಪದಲ್ಲಿ ಬೆಂಬಲಿಸಿಲ್ಲ

  • ಉನ್ನತ ಹುದ್ದೆಯಲ್ಲಿರುವ ರಾಜಕೀಯ ನೇತಾರರೊಬ್ಬರು ಸುಪ್ರೀಂ ಕೋರ್ಟ್‌ನ ತೀರ್ಪೊಂದನ್ನು ಪೂರ್ವಗ್ರಹ ಪೀಡಿತರಾಗಿ ಈ ರೀತಿ ತಪ್ಪಾಗಿ ನಿರೂಪಣೆ ಮಾಡಬಾರದು. ಇಂತಹ ಹೇಳಿಕೆಗಳು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ

  • ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರ ಕುರಿತು ಅವಹೇಳನಕಾರಿ ಹೇಳಿಕೆ ನೀಡಬಾರದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.