
ಕೋಲ್ಕತ್ತ : ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಮೂಲದಿಂದ ಕಿತ್ತೊಗೆದು, ದೇಶಭಕ್ತರು ಮತ್ತು ರಾಷ್ಟ್ರೀಯವಾದಿಗಳ ಸರ್ಕಾರ ಸ್ಥಾಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಮತದಾರರಲ್ಲಿ ಮನವಿ ಮಾಡಿದರು.
ಉತ್ತರ 24 ಪರಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯು ರಾಜ್ಯಕ್ಕಷ್ಟೇ ಅಲ್ಲದೆ, ರಾಷ್ಟ್ರೀಯ ಭದ್ರತೆಗೂ ನಿರ್ಣಾಯಕವಾಗಿದೆ ಎಂದರು.
‘ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವು ನುಸುಳುಕೋರರಿಗೆ ಆಶ್ರಯ ನೀಡುತ್ತಿದೆ, ಭ್ರಷ್ಟಾಚಾರವನ್ನು ಸಾಂಸ್ಥೀಕರಣಗೊಳಿಸುತ್ತಿದೆ ಮತ್ತು ಚುನಾವಣಾ ಲಾಭಕ್ಕಾಗಿ ಗಡಿ ಭದ್ರತಾ ಕ್ರಮಗಳನ್ನು ತಡೆಯುತ್ತಿದೆ’ ಎಂದು ಆರೋಪಿಸಿದರು.
ನ್ಯಾಯಾಲಯದ ಆದೇಶದ ಬಳಿಕವೂ ಟಿಎಂಸಿ ಸರ್ಕಾರ, ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಬಿಎಸ್‌ಎಫ್‌ಗೆ ಜಮೀನು ಹಸ್ತಾಂತರಿಸುತ್ತಿಲ್ಲ. ನುಸುಳುಕೋರರು ಅದರ ಮತ ಬ್ಯಾಂಕ್ ಆಗಿರುವ ಕಾರಣಕ್ಕೆ ಹಾಗೆ ಮಾಡುತ್ತಿದೆ ಎಂದು ಅವರು ದೂರಿದರು.
ಈ ಬಾರಿ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಶೇಕಡ 50ಕ್ಕೂ ಹೆಚ್ಚು ಮತಗಳನ್ನು ಪಡೆದು ಭಾರಿ ಬಹುಮತದಿಂದ ಸರ್ಕಾರ ರಚಿಸುತ್ತದೆ ಎಂಬ ನಿರೀಕ್ಷೆಯಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.