ADVERTISEMENT

ರಾಷ್ಟ್ರೀಯತೆ, ಅಭಿವೃದ್ಧಿಯೇ ಗುರಿ: ಶಾ

ಮಹಾರಾಷ್ಟ್ರದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದ ಬಿಜೆಪಿ ಅಧ್ಯಕ್ಷ: ಕಾಶ್ಮೀರ ವಿಶೇಷಾಧಿಕಾರ ರದ್ದತಿಯೇ ಚುನಾವಣಾ ವಿಚಾರ

ಪಿಟಿಐ
Published 22 ಸೆಪ್ಟೆಂಬರ್ 2019, 19:49 IST
Last Updated 22 ಸೆಪ್ಟೆಂಬರ್ 2019, 19:49 IST
ಮುಂಬೈಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಕೇಂದ್ರದ ಗೃಹಸಚಿವ ಅಮಿತ್‌ ಶಾ ಮಾತನಾಡಿದರು ಪಿಟಿಐ ಚಿತ್ರ
ಮುಂಬೈಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಕೇಂದ್ರದ ಗೃಹಸಚಿವ ಅಮಿತ್‌ ಶಾ ಮಾತನಾಡಿದರು ಪಿಟಿಐ ಚಿತ್ರ   

ಮುಂಬೈ: ‘ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ದೇಶವನ್ನು ಮುನ್ನಡೆಸುವುದು ನಮ್ಮ ಗುರಿ’ ಎಂದು ಕೇಂದ್ರದ ಗೃಹಸಚಿವ ಅಮಿತ್‌ ಶಾ ಭಾನುವಾರ ಹೇಳಿದರು.

ಇಲ್ಲಿನ ಉಪನಗರ ಗೋರೆಗಾಂವ್‌ನಲ್ಲಿ ಆಯೋಜಿಸಿದ್ದ ಚುನಾವಣಾ ರ್‍ಯಾಲಿಯೊಂದರಲ್ಲಿ ಮಾತನಾಡಿದ ಅವರು, ‘ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ಸಂವಿಧಾನದ 370ನೇ ಮತ್ತು 35 (ಎ) ವಿಧಿಗಳನ್ನು ರದ್ದು ಮಾಡಿರುವ ಸರ್ಕಾರದ ಕ್ರಮಗಳನ್ನು ಕುರಿತ ಚರ್ಚೆಯ ಮೂಲಕವೇ ಚುನಾವಣಾ ಪ್ರಚಾರ ನಡೆಯುತ್ತಿರುವುದು ಸಂತೋಷದ ವಿಚಾರ’ ಎಂದರು.

ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚಿಸಲು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಹಾಂಧಿ ಮತ್ತು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರು ಬಂದಾಗ, ‘ನೀವು 370ನೇ ವಿಧಿಯನ್ನು ರದ್ದು ಮಾಡಿರುವುದನ್ನು ಸಮರ್ಥಿಸುವಿರೋ ಅಥವಾ ವಿರೋಧಿಸುವಿರೋ’ ಎಂದು ಅವರನ್ನು ಪ್ರಶ್ನಿಸಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ADVERTISEMENT

‘370ನೇ ವಿಧಿಯನ್ನು ರದ್ದುಪಡಿಸಿರುವುದರಲ್ಲೂ ಕಾಂಗ್ರೆಸ್‌ನವರು ರಾಜಕೀಯ ಹುಡುಕುತ್ತಿದ್ದಾರೆ. ರಾಹುಲ್‌ ಗಾಂಧಿ ಇತ್ತೀಚೆಗೆ ರಾಜಕೀಯಕ್ಕೆ ಬಂದವರು. ಅವರು ಇತಿಹಾಸವನ್ನು ಅರಿಯಬೇಕು. ವಿಶೇಷಾಧಿಕಾರ ರದ್ದುಮಾಡಿದ ನಂತರ ಕಾಶ್ಮೀರದಲ್ಲಿ ಒಂದೇ ಒಂದು ಗುಂಡು ಹಾರಿಸಿಲ್ಲ. ಎಲ್ಲೂ ಶಾಂತಿಭಂಗವಾಗಿಲ್ಲ. ಮುಂದಿನ ದಿನಗಳಲ್ಲಿ ಭಯೋತ್ಪಾದನೆಯನ್ನೂ ಸಂಪೂರ್ಣವಾಗಿ ಮಟ್ಟಹಾಕಲಾಗುವುದು’ ಎಂದರು.

‘ಕಾಶ್ಮೀರದಲ್ಲಿ ಆಡಳಿತ ನಡೆಸಿದ ಮೂರು ಕುಟುಂಬಗಳು ಅಲ್ಲಿ ‘ಭ್ರಷ್ಟಾಚಾರ ವಿರೋಧಿ ದಳ’ ಸ್ಥಾಪನೆಗೆ ಅವಕಾಶವನ್ನೇ ನೀಡಲಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದ್ದವರಿಗೆ ಈಗ ಕಾಶ್ಮೀರದ ಚಳಿಯಲ್ಲೂ ಸೆಕೆಯ ಅನುಭವವಾಗುತ್ತಿದೆ’ ಎಂದು ಯಾರ ಹೆಸರನ್ನೂ ಉಲ್ಲೇಖಿಸಿದೆ ಶಾ ಟೀಕಿಸಿದರು.

ನೆಹರೂ ಕಾರಣ: ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ರಚನೆಯಾಗುವುದಕ್ಕೆ ನೆಹರೂ ಅವರೇ ಕಾರಣ’ ಎಂದು ಮತ್ತೊಮ್ಮೆ ಆರೋಪಿಸಿದ ಅಮಿತ್‌ ಶಾ, ‘ನೆಹರೂ ಅವರು ಪಾಕಿಸ್ತಾನದ ಜೊತೆ ಕದನ ವಿರಾಮ ಘೋಷಿಸಿರದಿದ್ದರೆ ಮತ್ತು ಕಾಶ್ಮೀರ ವಿಚಾರವನ್ನು ನೆಹರೂ ಬದಲು ಸರ್ದಾರ್‌ ಪಟೇಲ್‌ ಅವರು ನಿರ್ವಹಿಸಿದ್ದರೆ ಇಂಥ ಒಂದು ಪ್ರದೇಶ ಅಸ್ತಿತ್ವಕ್ಕೇ ಬರುತ್ತಿರಲಿಲ್ಲ’ ಎಂದರು.

ಶಿವಸೇನಾ ಹೆಸರು ಉಲ್ಲೇಖಿಸದ ಶಾ

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಹಾಗೂ ಎನ್‌ಡಿಎ ಮೈತ್ರಿಗೆ ನಾಲ್ಕನೇ ಮೂರರಷ್ಟು ಬಹುಮತ ನೀಡುವಂತೆ ಶಾ ಮನವಿ ಮಾಡಿದರು.

ಮಹಾರಾಷ್ಟ್ರದಲ್ಲಿ ಬಿಜೆಪಿ– ಶಿವಸೇನಾ ಮೈತ್ರಿ ಇದ್ದರೂ, ಶಾ ಅವರು ಸುಮಾರು 45 ನಿಮಿಷಗಳ ತಮ್ಮ ಭಾಷಣದಲ್ಲಿ ಒಮ್ಮೆಯೂ ಶಿವಸೇನಾದ ಹೆಸರನ್ನು ಉಲ್ಲೇಖಿಸಲಿಲ್ಲ. ಬದಲಿಗೆ, ಫಡಣವೀಸ್‌ ಅವರನ್ನು ಮಹಾರಾಷ್ಟ್ರದ ‘ಹಾಲಿ ಮತ್ತು ಮುಂದಿನ ಮುಖ್ಯಮಂತ್ರಿ’ ಎಂದು ಬಣ್ಣಿಸಿದರು.

ಶಿವಸೇನಾ, ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುತ್ತಿದ್ದು, ಅಮಿತ್‌ ಶಾ ಅವರು ತಮ್ಮ ಮಾತಿನ ಮೂಲಕ ಶಿವಸೇನಾಗೆ ಚುರುಕು ಮುಟ್ಟಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

***

ಜನಸಂಘ, ಆನಂತರ ಬಿಜೆಪಿಯ ಮೂರು ತಲೆಮಾರುಗಳು 370ನೇ ವಿಧಿಯ ರದ್ದತಿಗಾಗಿ ಹೋರಾಟ ಮತ್ತು ತ್ಯಾಗಗಳನ್ನು ಮಾಡಿವೆ
–ಅಮಿತ್‌ ಶಾ, ಕೇಂದ್ರದ ಗೃಹಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.