ADVERTISEMENT

ಅಮಿತ್ ಶಾ ಬಂಗಾಳ ಭೇಟಿ; ಹಿಂದುತ್ವ, ರಾಷ್ಟ್ರೀಯತೆ ಪ್ರಮುಖ ಅಜೆಂಡಾ

ಆನಂದ್ ಮಿಶ್ರಾ
Published 19 ಡಿಸೆಂಬರ್ 2020, 1:23 IST
Last Updated 19 ಡಿಸೆಂಬರ್ 2020, 1:23 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಶನಿವಾರದಿಂದ ಆರಂಭವಾಗಲಿರುವ ಎರಡು ದಿನಗಳ ಬಂಗಾಳ ಭೇಟಿಯ ಸಂದರ್ಭದಲ್ಲಿ ರಾಷ್ಟ್ರೀಯತೆ, ಹಿಂದುತ್ವ ರಾಜಕಾರಣ ಹಾಗೂ ರೈತರ ಪ್ರತಿಭಟನೆ ಪ್ರಮುಖ ಚರ್ಚಾ ವಿಷಯವಾಗಿರಲಿದೆ.

ಪಶ್ಚಿಮ ಬಂಗಾಳ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಿರಂತರ ಸಂಘರ್ಷ ಘಟಿಸುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿಯು ಹೆಚ್ಚು ಕುತೂಹಲ ಕೆರಳಿಸಿದೆ.

ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಪೂರ್ವ ಸಿದ್ಧತೆಗಾಗಿ ಅಮಿತ್ ಶಾ ಅವರು ಸಾರ್ವಜನಿಕ ಸಭೆಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದ ಕೇಂದ್ರ ಸಚಿವರು, ಸಂಘಟನಾ ಕಾರ್ಯದರ್ಶಿಗಳು ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚುನಾವಣಾ ನಿರ್ವಹಣಾ ಕಾರ್ಯಗಳ ಬಗ್ಗೆ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.

ಬಿಜೆಪಿ, ರಾಜ್ಯದ ಎಲ್ಲ 42 ಲೋಕಸಭಾ ಸ್ಥಾನಗಳಲ್ಲಿ 'ಮಿಷನ್ ಬಂಗಾಳ'ದ ಅಡಿಯಲ್ಲಿ ವಿಧಾನಸಭಾ ಸ್ಥಾನಗಳ ಜವಾಬ್ದಾರಿಯನ್ನು ಆರು ಕೇಂದ್ರ ಸಚಿವರಿಗೆ ವಹಿಸಿದೆ. ಈ ಎಲ್ಲ ಸಚಿವರು ಪಕ್ಷವನ್ನು ಬಲಪಡಿಸಲು ತಿಂಗಳಲ್ಲಿ ಹದಿನೈದು ದಿನಗಳ ಕಾಲತಮ್ಮ ನಿಯೋಜಿತ ಕ್ಷೇತ್ರಗಳಲ್ಲಿ ಉಳಿದುಕೊಳ್ಳಲಿದ್ದು, ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಲಿದ್ದಾರೆ.

2019ನೇ ಸಾಲಿನಲ್ಲಿ 42 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆದ್ದ ನಂತರ ಪಶ್ಚಿಮ ಬಂಗಾಳ ಗದ್ದುಗೇರಲು ಬಿಜೆಪಿ ಶತ ಪ್ರಯತ್ನ ನಡೆಸುತ್ತಿದೆ. 2014ನೇ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಮಾತ್ರ ಗೆದ್ದಿತ್ತು.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ 22 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಇನ್ನೊಂದೆಡೆ ಎಡಪಕ್ಷಗಳಿಗೆ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗಿರಲಿಲ್ಲ. ಅತ್ತ ಕಾಂಗ್ರೆಸ್ ಎರಡು ಸ್ಥಾನಗಳಲ್ಲಿ ಜಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.