ADVERTISEMENT

ಭವಿಷ್ಯದಲ್ಲಿ ತಮಿಳರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಲಾಗುವುದೆಂದ ಅಮಿತ್ ಶಾ– ವರದಿ

ಶಾ ಅವರ ಈ ಹೇಳಿಕೆ ಬಗ್ಗೆ ಅಣ್ಣಾಮಲೈ ಪ್ರತಿಕ್ರಿಯೆ ಕೊಟ್ಟಿದ್ದಾರೆ

ಪಿಟಿಐ
Published 12 ಜೂನ್ 2023, 5:13 IST
Last Updated 12 ಜೂನ್ 2023, 5:13 IST
ಅಮಿತ್ ಶಾ
ಅಮಿತ್ ಶಾ   ಪಿಟಿಐ ಚಿತ್ರ

ಚೆನ್ನೈ: 'ಭವಿಷ್ಯದಲ್ಲಿ ತಮಿಳರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಲಾಗುವುದು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದಾಗಿ ವರದಿಯಾಗಿದೆ.

ಭಾನುವಾರ ಚೆನ್ನೈಗೆ ಭೇಟಿ ನೀಡಿದ್ದ ಅವರು ಬಿಜೆಪಿ ಮುಖಂಡರ, ಕಾರ್ಯಕರ್ತರ ಗೋಪ್ಯ ಸಭೆಯನ್ನು ಏರ್ಪಡಿಸಿದ್ದರು. ಈ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಅವರು ‘ಮುಂದಿನ ದಿನಗಳಲ್ಲಿ ತಮಿಳರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಲಾಗುವುದೆಂದು’ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಈ ಹಿಂದೆ ತಮಿಳರು ಪ್ರಧಾನಿಯಾಗುವ ಅವಕಾಶ ಡಿಎಂಕೆಯಿಂದ ಎರಡು ಬಾರಿ ತಪ್ಪಿದೆ ಎಂದು ಅವರು ಆರೋಪಿಸಿದ್ದಾರೆ ಎನ್ನಲಾಗಿದೆ.

ADVERTISEMENT

2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕು. ಆ ನಿಟ್ಟಿನಲ್ಲಿ ಬೂತ್ ಕಮೀಟಿಗಳನ್ನು ಬಲಪಡಿಸಬೇಕು ಎಂದು ಶಾ ಕರೆ ನೀಡಿದ್ದಾರೆ.

ಈ ಸುದ್ದಿಯ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ, ‘ಅಮಿತ್ ಶಾ ಅವರು ಕಾರ್ಯಕರ್ತರನ್ನು ಹುರಿದುಂಬಿಸಲು ಹಾಗೇ ಹೇಳಿದ್ದಾರೆ. ಶಾ ಅವರು 1982 ರಲ್ಲಿ ಬಿಜೆಪಿಯ ಒಂದು ಬೂತ್ ಅಧ್ಯಕ್ಷರಾಗಿದ್ದವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಈಗ ಗೃಹ ಸಚಿವರಾಗಿದ್ದಾರೆ. ನಮ್ಮ ಹೆಮ್ಮೆಯ ಪ್ರಧಾನಿಯವರೂ ಅಷ್ಟೇ, ತಳಮಟ್ಟದಿಂದ ಬಂದು ದೊಡ್ಡ ಹುದ್ದೆಗೆ ಏರಿದ್ದಾರೆ. ಆ ಅರ್ಥದಲ್ಲಿ ನಮ್ಮ ನಾಯಕರು ಹೇಳಿದ್ದು, ಇದು ನಮ್ಮ ಪಕ್ಷದ ಅದ್ಭುತ ಶಕ್ತಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.