ಪವನ್ ಕಲ್ಯಾಣ್
ಅಮರಾವತಿ: ಸಿಂಗಪುರದ ಕಟ್ಟಡವೊಂದರಲ್ಲಿ ನಡೆದ ಬೆಂಕಿ ಅವಘಡದಲ್ಲಿ ಸಿಲುಕಿ ಗಾಯಗೊಂಡಿದ್ದ ಕಿರಿಯ ಪುತ್ರ ಮಾರ್ಕ್ ಶಂಕರ್ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಭಾನುವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಸಿಂಗಪುರದಲ್ಲಿ ನಡೆದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಗಾಯಗೊಂಡ ನನ್ನ ಪುತ್ರ ಶಂಕರ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಸಿಂಗಪುರದ ಕಟ್ಟಡವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಬಾಲಕಿಯೊಬ್ಬರು ಮೃತಪಟ್ಟಿದ್ದರು. ಅದೇ ಕಟ್ಟಡದಲ್ಲಿದ್ದ ಪವನ್ ಕಲ್ಯಾಣ್ ಪುತ್ರ ಸೇರಿದಂತೆ 20 ಮಂದಿ ಗಾಯಗೊಂಡಿದ್ದರು.
ಸಿಂಗಪುರದ ರಿವರ್ ವ್ಯಾಲಿ ರಸ್ತೆಯಲ್ಲಿನ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಈ ಕಟ್ಟಡದಲ್ಲಿ ಹಲವು ವಾಣಿಜ್ಯ ಕಚೇರಿಗಳು, ಅಡುಗೆ ತರಬೇತಿ ಶಾಲೆ ಮತ್ತು ಮಕ್ಕಳಿಗಾಗಿ ಇರುವ ರೋಬೋಟಿಕ್ ಸಂಸ್ಥೆ ಕಾರ್ಯಾಚರಿಸುತ್ತಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.