ಮುರಳಿ ನಾಯಕ್ ಕುಟುಂಬ
ಕಲ್ಲಿತಾಂಡ (ಆಂಧ್ರಪ್ರದೇಶ): ಆಪರೇಷನ್ ಸಿಂಧೂರ ಸೇನಾ ಕಾರ್ಯಚರಣೆಯಲ್ಲಿ ಹುತಾತ್ಮರಾದ ಯೋಧ ಮುದಾವತ್ ಮುರಳಿ ನಾಯಕ್ ಅವರ ಕುಟುಂಬಕ್ಕೆ ಆಂಧ್ರ ಪ್ರದೇಶ ಸರ್ಕಾರ ₹50 ಲಕ್ಷ ಪರಿಹಾರ ಘೋಷಿಸಿದೆ.
ಮುರಳಿ ನಾಯಕ್ ಅವರ ಪಾರ್ಥಿವ ಶರೀರ ಶನಿವಾರ ರಾತ್ರಿ ಶ್ರೀ ಸತ್ಯಸಾಯಿ ಜಿಲ್ಲೆಯ ಕಲ್ಲಿತಾಂಡದಲ್ಲಿರುವ ಅವರ ಮನೆಗೆ ತಲುಪಿದೆ. ಇಂದು(ಭಾನುವಾರ) ಪಾರ್ಥಿವ ಶರೀರದ ದರ್ಶನ ಪಡೆದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ್ದಾರೆ.
ಪವನ್ ಕಲ್ಯಾಣ್ ಅವರೂ ವೈಯಕ್ತಿಕವಾಗಿ ₹25 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಲ್ಯಾಣ್, ‘ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮುರಳಿ ನಾಯಕ್ ಅವರ ಕುಟುಂಬಕ್ಕೆ ₹50 ಲಕ್ಷ ಪರಿಹಾರ, ಐದು ಎಕರೆ ಕೃಷಿ ಭೂಮಿ, ವಸತಿಗಾಗಿ 300 ಚದರ ಯಾರ್ಡ್ ನಿವೇಶನವನ್ನು ಘೋಷಿಸಿದ್ದಾರೆ. ಸಂಪುಟದ ಚರ್ಚೆಯ ನಂತರ ನಾಯಕ್ ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗವನ್ನು ಸಹ ನೀಡಲಾಗುವುದು’ ಎಂದು ಹೇಳಿದ್ದಾರೆ.
ಐಟಿ ಸಚಿವ ನಾರಾ ಲೋಕೇಶ್ ಮತ್ತು ಇತರ ಸಚಿವರು ನಾಯಕ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿ, ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.
ನಾಯಕ್ ಅವರ ಅಂತ್ಯಕ್ರಿಯೆಯನ್ನು ಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಆಂಧ್ರಪ್ರದೇಶ ಸರ್ಕಾರ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.