ADVERTISEMENT

ಸಲಿಂಗ ಯುವತಿಯರ ಸಹಜೀವನಕ್ಕೆ ಆಂಧ್ರ HC ಅಸ್ತು: ಮಧ್ಯ ಬಾರದಂತೆ ಪಾಲಕರಿಗೆ ತಾಕೀತು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 11:09 IST
Last Updated 19 ಡಿಸೆಂಬರ್ 2024, 11:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಮರಾವತಿ: ಸಲಿಂಗ ಯುವತಿಯರ ಸಹಜೀವನದ ಹಕ್ಕನ್ನು ಎತ್ತಿ ಹಿಡಿದಿರುವ ಆಂಧ್ರ ಪ್ರದೇಶ ಹೈಕೋರ್ಟ್‌, ತಮ್ಮ ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯವನ್ನು ದೃಢೀಕರಿಸಿದೆ.

ತನ್ನ ಸಂಗಾತಿ ಲಲಿತಾ (ಹೆಸರು ಬದಲಿಸಲಾಗಿದೆ) ಇಚ್ಛೆಯ ವಿರುದ್ಧವಾಗಿ ಅವರ ಪಾಲಕರು ನರಸಿಪಟ್ಟಣಂನಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಕವಿತಾ (ಹೆಸರು ಬದಲಿಸಲಾಗಿದೆ) ಅವರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾ. ರಘುನಂದನ್ ರಾವ್ ಹಾಗೂ ನ್ಯಾ. ಕೆ. ಮಹೇಶ್ವರ ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠವು ನಡೆಸಿತ್ತು.

ADVERTISEMENT

‘ಲಲಿತಾ ಅವರು ವಯಸ್ಕರಾಗಿದ್ದು, ಅವರ ಬದುಕಿನ ನಿರ್ಧಾರವನ್ನು ಅವರೇ ತೆಗೆದುಕೊಳ್ಳಲು ಸ್ವತಂತ್ರರು ಮತ್ತು ಶಕ್ತರು. ಹೀಗಾಗಿ ಈ ಜೋಡಿಯ ಸಂಬಂಧದಲ್ಲಿ ಮಧ್ಯಪ್ರವೇಶಿಸಬಾರದು’ ಎಂದು ಹೈಕೋರ್ಟ್ ತಾಕೀತು ಮಾಡಿದೆ. ವಿಜಯವಾಡದಲ್ಲಿ ನೆಲೆಸಿರುವ ಈ ಜೋಡಿಯು ಕಳೆದ ಒಂದು ವರ್ಷದಿಂದ ಸಹಜೀವನ ನಡೆಸುತ್ತಿದ್ದಾರೆ.

ಪ್ರಕರಣದ ಹಿನ್ನೆಲೆ: ಸಂಗಾತಿ ಕಾಣೆಯಾಗಿರುವ ಕುರಿತು ಕವಿತಾ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡು, ಲಲಿತಾ ಅವರನ್ನು ಅವರ ಪಾಲಕರ ಮನೆಯಲ್ಲಿ ಪತ್ತೆ ಮಾಡಿದ್ದರು. ಅವರನ್ನು ರಕ್ಷಿಸಿದ ನಂತರ, ಪುನರ್ವಸತಿ ಕೇಂದ್ರದಲ್ಲಿ 15 ದಿನಗಳ ಕಾಲ ಅವರನ್ನು ಇಡಲಾಗಿತ್ತು. ತಾನು ವಯಸ್ಕಳಾಗಿದ್ದು, ನನ್ನ ಸಂಗಾತಿಯೊಂದಿಗೆ ಇರಬಯಸುತ್ತೇನೆ ಎಂದು ಅವರು ಮನವಿ ಸಲ್ಲಿಸಿದ್ದರು. ಜತೆಗೆ ತನ್ನನ್ನು ಅಕ್ರಮ ಬಂಧನದಲ್ಲಿಟ್ಟಿರುವ ಕುರಿತು ತನ್ನ ತಂದೆಯ ವಿರುದ್ಧ ಲಲಿತಾ ದೂರು ನೀಡಿದ್ದರು.

ಪೊಲೀಸರ ಮಧ್ಯಪ್ರವೇಶದಿಂದಾಗಿ ಲಲಿತಾ ವಿಜಯವಾಡಕ್ಕೆ ಬಂದಿದ್ದರು ಹಾಗೂ ವೃತ್ತಿಗಾಗಿ ಕಚೇರಿಗೆ ಹೋಗುತ್ತಿದ್ದರು. ಜತೆಗೆ ತನ್ನ ಸಂಗಾತಿಯನ್ನೂ ಆಗಾಗ್ಗ ಭೇಟಿಯಾಗುತ್ತಿದ್ದರು. ಆದರೆ ಈ ನಡುವೆ, ಲಲಿತಾ ಅವರ ತಂದೆ ಬಲವಂತದಿಂದ ಮಗಳನ್ನು ತಮ್ಮ ಕಾರಿನಲ್ಲಿ ಕರೆದೊಯ್ದಿದ್ದರು. ಇದರ ವಿರುದ್ಧ ಕವಿತಾ ಅವರು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ವಿರುದ್ಧವಾಗಿ ಲಲಿತಾ ಅವರ ತಂದೆಯೂ ಕವಿತಾ ವಿರುದ್ಧ ಪ್ರತಿ ದೂರು ನೀಡಿದ್ದು, ತನ್ನ ಮಗಳ ಭೇಟಿಗೆ ಪಾಲಕರಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.

‘ಒಂದೇ ಮನೆಯಲ್ಲಿ ಸಹಜೀವನ ನಡೆಸಲು ನಿಸ್ಸಂದಿಗ್ದವಾದ ಒಪ್ಪಿಗೆ ಇದೆ ಎಂದಿರುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಕವಿತಾ ಪರ ವಕೀಲ ಜಡ ಶ್ರವಣ ಕುಮಾರ್ ಉಲ್ಲೇಖಿಸಿ, ತನ್ನ ಅರ್ಜಿದಾರರ ಸಂಗಾತಿಯು ಅವರ ಪಾಲಕರು ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ಹೋಗಲು ನಿರಾಕರಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಲಲಿತಾ ಅವರ ಪಾಲಕರ ವಿರುದ್ಧ ನೀಡಿರುವ ದೂರನ್ನು ಹಿಂಪಡೆಯುವುದಾಗಿ ಕವಿತಾ ಹೇಳಿದ್ದಾರೆ. ಹೀಗಾಗಿ ಈ ಜೋಡಿಯ ನಡುವೆ ಪಾಲಕರ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ನ್ಯಾಯಾಲಯವನ್ನು ಕೋರಿದರು. ಲಲಿತಾ ಅವರನ್ನು ವಿಜಯವಾಡ ಪೊಲೀಸರು ನ್ಯಾಯಾಲಯದ ಎದುರು ಹಾಜರುಪಡಿಸಿದರು.

ಅರ್ಜಿಯನ್ನು ಇತ್ಯರ್ಥಗೊಳಿಸಿದ ಹೈಕೋರ್ಟ್‌ನ ವಿಭಾಗೀಯ ಪೀಠ, ಲಲಿತಾ ಅವರ ಪಾಲಕರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.