
ನವದೆಹಲಿ: ಬ್ಯಾಂಕ್ ಸಾಲದ ವಂಚನೆ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ಅಂಬಾನಿ ಮತ್ತು ಅನಿಲ್ ಧೀರೂಭಾಯಿ ಅಂಬಾನಿ ಗ್ರೂಪ್‌ಗೆ (ಎಡಿಎಜಿ) ಸುಪ್ರೀಂ ಕೋರ್ಟ್ ಶುಕ್ರವಾರ ಹೊಸ ನೋಟೀಸ್ ಜಾರಿ ಮಾಡಿದೆ.
ಈ ಪ್ರಕರಣದ ತನಿಖೆಯ ವಸ್ತುಸ್ಥಿತಿ ವರದಿಯನ್ನು 10 ದಿನಗಳ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಸುಪ್ರೀಂ ಕೋರ್ಟ್ ಸೂಚಿಸಿದೆ.
ಅರ್ಜಿದಾರ, ಕೇಂದ್ರದ ಮಾಜಿ ಕಾರ್ಯದರ್ಶಿ ಇ.ಎ.ಎಸ್ ಶರ್ಮಾ ಅವರು ಸಲ್ಲಿಸಿರುವ ಪಿಐಎಲ್‌ಗೆ ಸಂಬಂಧಿಸಿದಂತೆ ಅನಿಲ್ ಅಂಬಾನಿ ಹಾಗೂ ಎಡಿಎಜಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಿರುವುದನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠವು ಗಮನಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪೀಠವು ಕಳೆದ ವರ್ಷ ನವೆಂಬರ್ 18ರಂದು ಕೇಂದ್ರ ಸರ್ಕಾರ, ಸಿಬಿಐ, ಇ.ಡಿ, ಅನಿಲ್ ಅಂಬಾನಿ ಮತ್ತು ಎಡಿಎಜಿಗೆ ನೋಟಿಸ್ ನೀಡಿದೆ.
ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಿ ತಮ್ಮ ಪ್ರತಿಕ್ರಿಯೆ ಸಲ್ಲಿಸಲು ಅನಿಲ್ ಅಂಬಾನಿ ಮತ್ತು ಎಡಿಎಜಿಗೆ ಕೊನೆಯ ಅವಕಾಶವನ್ನು ನೀಡುತ್ತಿರುವುದಾಗಿ ಪೀಠ ಹೇಳಿದೆ. ಅನಿಲ್ ಅಂಬಾನಿ ಮತ್ತು ಎಡಿಎಜಿಗೆ ನೋಟಿಸ್ ಲಭಿಸಿರುವುದನ್ನು ಖಚಿತಪಡಿಸಿಕೊಳ್ಳಲು ಬಾಂಬೆ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಸೂಚಿಸಿದ ಪೀಠ, 10 ದಿನಗಳ ಬಳಿಕ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಿತು.
ಭಾರಿ ಮೊತ್ತದ ಬ್ಯಾಂಕಿಂಗ್ ವಂಚನೆಯಲ್ಲಿ ಬ್ಯಾಂಕ್‌ಗಳು ಮತ್ತು ಅದರ ಅಧಿಕಾರಿಗಳ ಕೈವಾಡವಿರುವುದರ ಬಗ್ಗೆ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿಲ್ಲ ಎಂದು ಅರ್ಜಿದಾರ ಶರ್ಮಾ ಪರ ಹಾಜರಾದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಪೀಠಕ್ಕೆ ತಿಳಿಸಿದರು.
‘2007–08ರಿಂದಲೇ ಈ ವಂಚನೆ ನಡೆಯುತ್ತಿದ್ದರೂ, 2025ರಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯ ಪ್ರಗತಿ ಬಗ್ಗೆ ವರದಿ ನೀಡುವಂತೆ ಸಿಬಿಐ ಹಾಗೂ ಇ.ಡಿಗೆ ನಿರ್ದೇಶಿಸಬೇಕು’ ಎಂದು ಅವರು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.