ADVERTISEMENT

ಸ್ವೀಡನ್‌ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡಿದ ರಾಳೇಗಣ ಸಿದ್ಧಿ ಗ್ರಾಮ

ನೀರಿನ ಸಮಸ್ಯೆ ನಿವಾರಣೆಗೆ ಅಣ್ಣಾ ಹಜಾರೆ ಗ್ರಾಮದ ಪದ್ಧತಿ ಅನುಕರಣೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:40 IST
Last Updated 25 ನವೆಂಬರ್ 2019, 19:40 IST

ಸ್ಟಾಕ್‌ಹೋಮ್‌ (ಪಿಟಿಐ): ಬಾಲ್ಟಿಕ್‌ ಸಮುದ್ರದಲ್ಲಿನ ಸ್ವೀಡನ್‌ನ ದ್ವೀಪವೊಂದರಲ್ಲಿ ಬೇಸಿಗೆಯಲ್ಲಿ ಉದ್ಭವಿಸುತ್ತಿದ್ದ ತೀವ್ರ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ಭಾರತದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಗ್ರಾಮ ರಾಳೇಗಣ ಸಿದ್ಧಿ ಸ್ಫೂರ್ತಿಯಾಗಿದೆ.

ಒಂದು ಕೋಟಿ ಜನಸಂಖ್ಯೆ ಹೊಂದಿರುವ ಸ್ವೀಡನ್‌ನ ಪ್ರಮುಖ ಭಾಗದಲ್ಲಿ ಸರೋವರಗಳು ಸಾಕಷ್ಟಿದ್ದು, ಶುದ್ಧ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, 900 ಜನಸಂಖ್ಯೆ ಹೊಂದಿರುವ ದಕ್ಷಿಣ ಭಾಗದ ಗಾಟ್‌ಲ್ಯಾಂಡ್‌ನ ಸ್ಟೋರ್‌ಸುಡ್ರೆಟ್‌ ದ್ವೀಪದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ.

ಪ್ರವಾಸಿಗರೇ ಹೆಚ್ಚಾಗಿ ಬರುವ ಈ ದ್ವೀಪದಲ್ಲಿ ಹೇರಳವಾಗಿ ಮಳೆಯಾದರೂ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿರಲಿಲ್ಲ. ಮಳೆ ನೀರು ನೇರವಾಗಿ ಸಮುದ್ರಕ್ಕೆ ಸೇರುತ್ತಿದ್ದುದರಿಂದ ಈ ಸಮಸ್ಯೆ ತೀವ್ರವಾಗಿತ್ತು. ರಾಳೇಗಣ ಸಿದ್ಧಿ ಗ್ರಾಮದಲ್ಲಿ ಕೈಗೊಂಡಿರುವ ಅಂತರ್ಜಲ ಪುನಃಶ್ಚೇತನ ಯೋಜನೆಯನ್ನು ಈ ದ್ವೀಪದಲ್ಲಿಯೂ ಇಲ್ಲಿನ ವಿಜ್ಞಾನಿಗಳು ಅಳವಡಿಸಿಕೊಂಡಿದ್ದಾರೆ.

ADVERTISEMENT

‘ಈ ದ್ವೀಪದಲ್ಲಿ ನೀರಿನ ಸಮಸ್ಯೆ ತೀವ್ರವಾಗಿತ್ತು. ದ್ವೀಪದ ಉತ್ತರ ಭಾಗದಿಂದ ನೀರನ್ನು ತರಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆ ನಿವಾರಣೆಗೆ ಅಂತರ್ಜಲ ಪುನಃಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಈ ಯೋಜನೆ ಕೈಗೊಂಡಿರುವ ಐವಿಎಲ್‌ ಸ್ವೀಡನ್‌ ಪರಿಸರ ಸಂಶೋಧನಾ ಸಂಸ್ಥೆಯ ತಜ್ಞ ಸ್ಟಾಫನ್‌ ಫಿಲಿಪ್ಸನ್‌ ಪತ್ರಕರ್ತರೊಂದಿಗೆ ನಡೆದ ಸಂವಾದದಲ್ಲಿ ಹೇಳಿದ್ದಾರೆ.

‘ಭಾರತದ ಗ್ರಾಮಸ್ಥರು ಮಳೆ ನೀರು ಸಂಗ್ರಹಕ್ಕೆ ಅನುಸರಿಸುವ ಸಾಂಪ್ರದಾಯಿಕ ಸಂರಕ್ಷಣಾ ಕ್ರಮವನ್ನು ಅಳವಡಿಸಿಕೊಳ್ಳುವ ಕಲ್ಪನೆಯನ್ನು ಐವಿಎಲ್‌ ತಜ್ಞೆ ರೂಪಾಲಿ ದೇಶಮುಖ್‌ ನೀಡಿದ್ದರು. ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಅಧ್ಯಯನ ನಡೆಸಲು ಯೋಜನೆ ಪ್ರಾರಂಭಿಸಿದ್ದರು.

ಮಹಾರಾಷ್ಟ್ರದ ನಾಗ್ಪುರ್‌ ಮೂಲದ ದೇಶಮುಖ್‌ ಅವರು ‘ರಾಳೇಗಣ ಸಿದ್ಧಿ ಮತ್ತು ಸ್ಟೋರ್‌ಸುಡ್ರೆಟ್‌ ದ್ವೀಪದ ನಡುವೆ ಸಾಮ್ಯತೆಗಳಿವೆ. ರಾಳೇಗಣ ಸಿದ್ಧಿ ಗ್ರಾಮದಲ್ಲಿ ಅಂತರ್ಜಲ ಸಂರಕ್ಷಣೆಗೆ ಸಾಂಪ್ರದಾಯಿಕ ಪದ್ಧತಿ ಬಳಸಲಾಗುತ್ತಿದೆ. ಇದೇ ಪದ್ಧತಿಯನ್ನು ಅನುಸರಿಸಿ, ದ್ವೀಪದಲ್ಲಿ ಚೆಕ್‌ ಡ್ಯಾಂ, ಮಳೆ ನೀರು ಸಂಗ್ರಹಕ್ಕಾಗಿ ಕೊಳ್ಳಗಳನ್ನು ನಿರ್ಮಿಸಲಾಯಿತು’ ಎಂದು ಹೇಳಿದರು.

‘ಸಾಂಪ್ರದಾಯಿಕ ಪದ್ಧತಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಮೂಲಕ ಅಂತರ್ಜಲ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಇದರಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ’ ಎಂದು ಫಿಲಿಪ್ಸನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.