ADVERTISEMENT

ತಮಿಳುನಾಡು: ಮಾಜಿ ಸಚಿವ ವೀರಮಣಿಗೆ ಸೇರಿದ 20 ಸ್ಥಳಗಳ ಮೇಲೆ ವಿಚಕ್ಷಣಾ ದಳ ದಾಳಿ

ಪಿಟಿಐ
Published 16 ಸೆಪ್ಟೆಂಬರ್ 2021, 8:32 IST
Last Updated 16 ಸೆಪ್ಟೆಂಬರ್ 2021, 8:32 IST
.
.   

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ವಿಚಕ್ಷಣ ಮತ್ತು ಭ್ರಷ್ಟಾಚಾರ ನಿಗ್ರಹ ದಳ ಗುರುವಾರ ಮಾಜಿ ಸಚಿವ, ಎಐಎಡಿಎಂಕೆ ನಾಯಕ ಕೆ.ಸಿ.ವೀರಮಣಿ ಅವರಿಗೆ ಸೇರಿದ 20ಕ್ಕೂ ಹೆಚ್ಚು ಕಡೆಗಳಲ್ಲಿ ಶೋಧ ಕಾರ್ಯ ಕೈಗೊಂಡಿದೆ.

ಮಾಜಿ ಸಚಿವರ ಸ್ವಂತ ಊರಾದ ತಿರುಪತ್ತೂರು ಜಿಲ್ಲೆಯ ಜೋಲಾರ್‌ಪೆಟ್ಟಾಯಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಕಡೆಗಳಲ್ಲಿ ಅಧಿಕಾರಿಗಳ ತಂಡ ಶೋಧಕಾರ್ಯ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2016 ರಿಂದ 2021ರವರಗೆ ತಮಿಳುನಾಡಿನಲ್ಲಿ ಅಧಿಕಾರದಲ್ಲಿದ್ದ ಎಐಎಡಿಎಂಕೆ ನೇತೃತ್ವದ ಸರ್ಕಾರದಲ್ಲಿ ವೀರಮಣಿ ಯವರು ವಾಣಿಜ್ಯ ತೆರಿಗೆ ಖಾತೆ ಸಚಿವರಾಗಿದ್ದರು.

ADVERTISEMENT

ಈಗಾಗಲೇ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ, ಎಐಎಡಿಎಂಕೆ ಪಕ್ಷದ ಮಾಜಿ ಸಚಿವರಾದ ಎಂ.ಆರ್‌ ವಿಜಯಭಾಸ್ಕರ್‌(ಸಾರಿಗೆ) ಮತ್ತು ಎಸ್‌.ಪಿ. ವೇಲುಮಣಿ (ಪೌರಾಡಳಿತ) ಅವರಿಗೆ ಸೇರಿದ ಸ್ಥಳಗಳ ಮೇಲೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ಇಲಾಖೆಯವರು ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಿದ್ದಾರೆ. ಮಾಜಿ ಸಚಿವರ ಸರಣಿಯಲ್ಲಿ ವೀರರಮಣಿ ಮೂರನೆಯವರು.

‘ಇಂಥ ದಾಳಿಗಳ ಮೂಲಕ ಆಡಳಿತಾರೂಢ ಡಿಎಂಕೆ ಪಕ್ಷ ತನ್ನ ಪ್ರತಿಸ್ಪರ್ಧಿ ಪಕ್ಷವನ್ನು ರಾಜಕೀಯವಾಗಿ ಗುರಿಯಾಗಿಸಲು ಪ್ರಯತ್ನಿಸುತ್ತಿದೆ. ಇಂಥ ಯಾವುದೇ ದಾಳಿಗಳಿಗೆ ನಾವು ಜಗ್ಗುವುದಿಲ್ಲ‘ ಎಂದು ಎಐಎಡಿಎಂಕೆ ಪ್ರತಿಕ್ರಿಯಿಸಿದೆ.

ವೀರಮಣಿ ಅವರ ವಿರುದ್ಧ ‘ಎಐಎಡಿಎಂಕೆ ಆಳ್ವಿಕೆಯ ಅವಧಿಯಲ್ಲಿ ಸುಮಾರು ₹28 ಕೋಟಿ ಮೊತ್ತದ ಅಕ್ರಮ ಆಸ್ತಿ ಸಂಗ್ರಹಿಸಿದ್ದಾರೆ‘ ಎಂಬ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.