
ರಾಹುಲ್ ಗಾಂಧಿ
ನವದೆಹಲಿ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಅಮೆರಿಕದ ‘ ಬಿಗಿ ಹಿಡಿತ’ಕ್ಕೆ ಸಿಲುಕಿ ಪ್ರಧಾನಿ ನರೇಂದ್ರ ಮೋದಿ ಅವರು ‘ದೈನ್ಯ ಸ್ಥಿತಿ’ಯಲ್ಲಿ ಶರಣಾಗಿದ್ದಾರೆ. ಹೀಗಾಗಿ ಅಮೆರಿಕಕ್ಕೆ ಹೆಚ್ಚಿನದನ್ನು ನೀಡಿ, ಭಾರತ ಕಡಿಮೆ ಪಡೆದುಕೊಳ್ಳುವ ಒಪ್ಪಂದಕ್ಕೆ ಅವರು ಸಹಿ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.
ಒಪ್ಪಂದದಿಂದಾಗಿ ಭಾರತವು ‘ಡೇಟಾ ಕಾಲೊನಿ’ ಆಗಲಿದೆ ಎಂದೂ ಟೀಕಿಸಿದ್ದಾರೆ.
ಒಪ್ಪಂದದ ಮೂಲಕ ದೇಶವನ್ನೇ ಮಾರಾಟ ಮಾಡಲಾಗಿದೆ ಎಂದು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ‘ಎಕ್ಸ್’ನಲ್ಲಿ ಕಿಡಿಕಾರಿದ್ದಾರೆ. ಇದರೊಂದಿಗೆ ಸಂಸತ್ತಿನಲ್ಲಿ ತಾವು ಇತ್ತೀಚೆಗೆ ಮಾತನಾಡಿದ್ದ ವಿಡಿಯೊವನ್ನೂ ಲಗತ್ತಿಸಿದ್ದಾರೆ.
‘ಅಮೆರಿಕನ್ನರ ಓಲೈಕೆಗಾಗಿ ನಮ್ಮ ರೈತರೇಕೆ ತ್ಯಾಗ ಮಾಡಬೇಕು? ತೈಲ ಪೂರೈಕೆಯನ್ನು ಅಮೆರಿಕದ ನಿಯಂತ್ರಣಕ್ಕೆ ನೀಡಿ, ಭಾರತದ ಇಂಧನ ಭದ್ರತೆಯೊಂದಿಗೆ ಏಕೆ ರಾಜಿಯಾಗಬೇಕು ಮತ್ತು ಪ್ರಧಾನಿ ಏಕೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ– ಈ ಎಲ್ಲಕ್ಕೂ ಉತ್ತರವೆಂದರೆ, ಮೋದಿ ಅಮೆರಿಕಕ್ಕೆ ಶರಣಾಗಿರುವುದು’ ಎಂದು ಹೇಳಿದ್ದಾರೆ.
‘ರಾಜಕೀಯ ‘ಬಿಗಿ ಹಿಡಿತ’ವು ಗುಟ್ಟಾಗಿರುತ್ತದೆ. ಸಾಮಾನ್ಯ ಜನರ ಕಣ್ಣಿಗೆ ಕಾಣುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರಷ್ಟೇ ಕಾಣುತ್ತದೆ’ ಎಂದಿದ್ದಾರೆ.
‘ಒಂದೆಡೆ ಅಮೆರಿಕದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧದ ಕ್ರಿಮಿನಲ್ ಪ್ರಕರಣ, ಇನ್ನೊಂದೆಡೆ ಎಪ್‌ಸ್ಟೈನ್ ಹಗರಣ, ಮತ್ತೊಂದೆಡೆ ಚೀನಾ (ನರವಣೆ ಅವರ ಅಪ್ರಕಟಿತ ‘ಆತ್ಮಚರಿತ್ರೆ’) ಇವೆಲ್ಲವೂ ಮೋದಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.