ADVERTISEMENT

ಆ. 9ರಂದು ‘ಇವಿಎಂ ಭಾರತ ಬಿಟ್ಟು ತೊಲಗು’ ಜಾಥಾ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 17:39 IST
Last Updated 16 ಜುಲೈ 2019, 17:39 IST
   

ನವದೆಹಲಿ: ಸ್ವಾತಂತ್ರ್ಯ ಸಂಗ್ರಾಮದ ‘ಭಾರತ ಬಿಟ್ಟು ತೊಲಗಿ’ ಚಳವಳಿಯ ರೀತಿಯಲ್ಲಿಯೇ ವಿದ್ಯುನ್ಮಾನ ಮತಯಂತ್ರದ (ಇವಿಎಂ) ವಿರುದ್ಧ ‘ಇವಿಎಂ ಭಾರತ ಬಿಟ್ಟು ತೊಲಗು’ ಎಂಬ ರಾಷ್ಟ್ರವ್ಯಾಪಿ ಜಾಥಾ ನಡೆಸಲು ನಿರ್ಧರಿಸಲಾಗಿದೆ. ಮತಪತ್ರಕ್ಕೆ ಹಿಂದಿರುಗುವಂತೆ ಒತ್ತಾಯಿಸುವ ಈ ಜಾಥಾ ಆಗಸ್ಟ್‌ 9ರಂದು ನಡೆಯಲಿದೆ. ಭಾರತ ಬಿಟ್ಟು ತೊಲಗಿ ಚಳವಳಿಯು 1942ರ ಆಗಸ್ಟ್‌ 9ರಂದು ಆರಂಭವಾಗಿತ್ತು.

ಇವಿಎಂ ವಿರೋಧಿ ರಾಷ್ಟ್ರೀಯ ಜನಾಂದೋಲನ (ಇವಿಆರ್‌ಜೆಎ) ಎಂಬ ಸಂಘಟನೆಯು ಈ ಜಾಥಾವನ್ನು ನಡೆಸಲಿದೆ. ಇವಿಎಂ ಅನ್ನು ವಿರೋಧಿಸುತ್ತಿರುವ ದೇಶದ ವಿವಿಧ ಸಂಘಟನೆಗಳು ಒಟ್ಟಾಗಿ ಇವಿಆರ್‌ಜೆಎ ರೂಪಿಸಿವೆ.

‘ಇವಿಎಂ ಭಾರತ ಬಿಟ್ಟು ತೊಲಗು’, ‘ಇವಿಎಂ ಓಡಿಸಿ, ದೇಶ ಉಳಿಸಿ’, ‘ಮತಪತ್ರ ಮರಳಿ ತನ್ನಿ’ ಎಂಬುದು ಅಭಿಯಾನದ ಘೋಷಣೆಗಳಾಗಿವೆ ಎಂದು ಇವಿಆರ್‌ಜೆಎ ಕಾರ್ಯಕರ್ತರು ಹೇಳಿದ್ದಾರೆ.

ADVERTISEMENT

ಸಾಮಾಜಿಕ ಹೋರಾಟಗಾರರಾದ ರವಿ ಭಿಲಾನೆ, ಫಿರೋಜ್‌ ಮಿಥಿಬೋರ್‌ವಾಲಾ, ಡಾ. ಸುನಿಲಂ, ಶಬ್ನಂ ಹಾಷ್ಮಿ, ಜ್ಯೋತಿ ಬೆಡೇಕರ್‌, ಧನಂಜಯ್‌ ಶಿಂಧೆ ಮುಂತಾದವರು ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. 16 ರಾಜ್ಯಗಳ ಪ್ರತಿನಿಧಿಗಳು ಹಾಜರಿದ್ದರು. ರೈತರು, ಕಾರ್ಮಿಕ ಸಂಘಟನೆ ಕಾರ್ಯಕರ್ತರು, ಮಹಿಳೆಯರು, ವಿದ್ಯಾರ್ಥಿಗಳು ಸಭೆಯಲ್ಲಿ ಇದ್ದರು.

‘ಇವಿಎಂ–ವಿವಿಪ್ಯಾಟ್‌ ವಂಚನೆಯನ್ನು ದೇಶವ್ಯಾಪಿ ಜಾರಿಗೆ ತರಲಾಗಿದೆ. ಚುನಾವಣೆಯ ಇಡೀ ಪ್ರಕ್ರಿಯೆಯನ್ನು ಬುಡಮೇಲು ಮಾಡಲಾಗಿದೆ. ಹಿಂದೆಂದೂ ಕಂಡಿಲ್ಲದ ಈ ಸ್ಥಿತಿಯು ನಮ್ಮ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ಭಾರಿ ಅಪಾಯಕ್ಕೆ ಒಡ್ಡಿದೆ’ ಎಂದು ಇವಿಆರ್‌ಜೆಎ ಹೇಳಿದೆ.

ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಸಮಾಲೋಚನಾ ಸಭೆಯಲ್ಲಿ ಹಾಜರಿದ್ದರು. ಕಾಂಗ್ರೆಸ್‌ನ ನಾನಾ ಪಟೋಲೆ, ಸಿಪಿಎಂನ ನೀಲೋತ್ಪಲ್ ಬಸು, ಸಿಪಿಐನ ಡಿ.ರಾಜಾ, ಎಎಪಿಯ ಸಂಜಯ್‌ ಸಿಂಗ್‌, ಬಿಎಸ್‌ಪಿಯ ಡ್ಯಾನಿಷ್‌ ಅಲಿ, ಎಸ್‌ಪಿಯ ಜಾವೇದ್‌ ಅಲಿ ಖಾನ್‌ ಮತ್ತು ಜೆಡಿಎಸ್‌ನ ಕೋಲ್ಸೆ ಪಟೇಲ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.