ADVERTISEMENT

ನಾಯ್ಡು ನೆಲೆಸಿದ್ದ ಬಂಗಲೆ ನೆಲಸಮಕ್ಕೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 18:40 IST
Last Updated 28 ಜೂನ್ 2019, 18:40 IST
   

ಅಮರಾವತಿ: ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿದ್ದಾಗ ನಿರ್ಮಿಸಿದ್ದ ಪ್ರಜಾವೇದಿಕೆ ಸಮ್ಮೇಳನ ಸಭಾಂಗಣ ನೆಲಸಮ ಕಾರ್ಯಾಚರಣೆ ಗುರುವಾರ ನಡೆದಿದೆ. ಅದಕ್ಕೆ ಹೊಂದಿಕೊಂಡಂತೆ ಇರುವ, ನಾಯ್ಡು ನೆಲೆಸಿರುವ ಬಂಗಲೆಯ ‘ತೆರವಿಗೆ’ ಆಂಧ್ರ
ಪ್ರದೇಶ ರಾಜಧಾನಿ ವಲಯಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ನೋಟಿಸ್ ಜಾರಿ ಮಾಡಿದೆ.

ಪ್ರಜಾವೇದಿಕೆ ಸಭಾಂಗಣದ 100 ಮೀಟರ್ ಅಂತರದಲ್ಲಿ ಬಂಗಲೆ ನಿರ್ಮಿಸಲಾಗಿದೆ. ‘ನದಿಪಾತ್ರದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದು, ಇದನ್ನು ಏಕೆ ನೆಲಸಮ ಮಾಡಬಾರದು’ ಎಂದು ಸಿಆರ್‌ಡಿಎಪ್ರಶ್ನಿಸಿದೆ. ಒಂದು ವಾರದಲ್ಲಿ ಉತ್ತರಿಸುವಂತೆಯೂ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಸಿಆರ್‌ಡಿಎ ಸಹಾಯಕ ನಿರ್ದೇಶಕ ನರೇಂದರ್‌ ರೆಡ್ಡಿ ಶುಕ್ರವಾರ ನೋಟಿಸ್‌ ಜಾರಿ ಮಾಡಿದರು. ಈಜುಕೊಳ, ತಾತ್ಕಾಲಿಕ ಹೆಲಿಪ್ಯಾಡ್ ಹೊಂದಿರುವ ಈ ಬಂಗಲೆಯನ್ನು ಪೂರ್ವಾನುಮತಿ ಪಡೆಯದೇ, ನಿರ್ಮಾಣ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಬಂಗಲೆ ಲಿಂಗಮನೇನಿ ಸಮೂಹಕ್ಕೇ ಸೇರಿದ್ದು, ನಾಯ್ಡು ಅವರು ಗುತ್ತಿಗೆಗೆ ಪಡೆದಿದ್ದಾರೆ. ಬಂಗಲೆ ನೆಲಸಮಗೊಳಿಸುವ ಸರ್ಕಾರದ ಸ್ಪಷ್ಟ ಸೂಚನೆಯ ಹಿಂದೆಯೇ, ನಾಯ್ಡು ಈಗ ಸೂಕ್ತ, ನೂತನ ಮನೆಯ ಹುಡುಕಾಟದಲ್ಲಿ ತೊಡಗಿದ್ದಾರೆ.

‘ಪಕ್ಕದ ನಿವಾಸದಲ್ಲಿ 69 ವರ್ಷ ವಯಸ್ಸಿನ ನನ್ನ ತಂದೆ ಮಲಗಿದ್ದಾಗಲೇಪ್ರಜಾವೇದಿಕೆ ಕಟ್ಟಡವನ್ನುಸರ್ಕಾರ ನೆಲಸಮಗೊಳಿಸುವುದು ಹೇಗೆ ಸಾಧ್ಯ? ಇದೆಂಥ ಪ್ರತೀಕಾರದ ರಾಜಕಾರಣ’ ಎಂದು ನಾಯ್ಡು ಪುತ್ರ ಎನ್.ಲೋಕೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಕಟ್ಟಡ ನಿರ್ಮಾಣ ನಿಯಮಗಳ ಉಲ್ಲಂಘನೆಯ ಇಂಥ ಸುಮಾರು 60 ಬಂಗಲೆಗಳನ್ನುಸಿಆರ್‌ಡಿಎ ಗುರುತಿಸಿದೆ. ನಾಯ್ಡು ಸೇರಿದಂತೆ ಸುಮಾರು 20 ಮಂದಿಗೆ ಮೊದಲ ದಿನವೇ ನೋಟಿಸ್‌ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.