ADVERTISEMENT

ಹಿರಿತನ, ಅರ್ಹತೆ ಆಧಾರದ ಮೇಲೆ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ನೇಮಕ: ’ಸುಪ್ರೀಂ’

ಪಿಟಿಐ
Published 5 ಸೆಪ್ಟೆಂಬರ್ 2021, 10:21 IST
Last Updated 5 ಸೆಪ್ಟೆಂಬರ್ 2021, 10:21 IST
   

ನವದೆಹಲಿ: ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕಾತಿ ಮಾಡುವ ಪ್ರಕ್ರಿಯೆಯು ಉತ್ತಮ ವ್ಯವಸ್ಥೆಯನ್ನು ಒಳಗೊಂಡಿದೆ. ಅರ್ಹತೆ ಮತ್ತು ಹಿರಿತನವನ್ನು ಹೈಕೋರ್ಟ್‌ ಕೊಲಿಜಿಯಂ ಪರಿಗಣಿಸಿ ನ್ಯಾಯಮೂರ್ತಿಗಳನ್ನು ನೇಮಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್‌.ಕೆ. ಕೌಲ್‌ ಮತ್ತು ಎಂ.ಎಂ. ಸುಂದರೇಶ್‌ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ತೆಲಂಗಾಣ ಹೈಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಎ. ವೆಂಕಟೇಶ್ವರ್‌ ರೆಡ್ಡಿ ಅವರನ್ನು ನೇಮಿಸುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ತಮ್ಮ ಆಕ್ಷೇಪಗಳನ್ನು ಪರಿಗಣಿಸುವಂತೆ ವಕೀಲ ಬಿ. ಶೈಲೇಶ್‌ ಸಕ್ಸೇನಾ ಎನ್ನುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯಗಳನ್ನು ತಿಳಿಸಿದೆ.

ADVERTISEMENT

ವಕೀಲರ ಅರ್ಜಿಯನ್ನು ತಿರಸ್ಕರಿಸಿದ ಪೀಠವು, ನ್ಯಾಯಾಲಯದ ಕಲಾಪವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ ವಕೀಲರ ಕಲ್ಯಾಣ ನಿಧಿಗೆ ₹ 5 ಲಕ್ಷಗಳನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕು ಎಂದು ನಿರ್ದೇಶನ ನೀಡಿತು.

ಜತೆಗೆ, ವಕೀಲರ ನಡವಳಿಕೆಯನ್ನು ತೆಲಂಗಾಣದ ಬಾರ್‌ ಕೌನ್ಸಿಲ್‌ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಪೀಠವು ತಿಳಿಸಿದೆ.

ತ್ರಿಸದಸ್ಯರ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಆಗಸ್ಟ್‌ 17ರಂದು ಸಭೆ ನಡೆಸಿ ವೆಂಕಟೇಶ್ವರ್‌ ರೆಡ್ಡಿ ಸೇರಿದಂತೆ ಆರು ನ್ಯಾಯಾಂಗ ಅಧಿಕಾರಿಗಳನ್ನು ತೆಲಂಗಾಣ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳನ್ನಾಗಿ ನೇಮಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿತ್ತು.

ವಕೀಲ ಸಕ್ಸೇನಾ ಅವರು, ರೆಡ್ಡಿ ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದರು. ರೆಡ್ಡಿ ಅವರ ವಿರುದ್ಧ ಹಲವು ಆರೋಪಗಳನ್ನು ಅರ್ಜಿದಾರರು ಮಾಡಿದ್ದರು. ತೆಲುಗು ದೇಶಂ ಪಕ್ಷದ ಸಂಸದರೊಬ್ಬರ ಕುಟುಂಬಕ್ಕೆ ರೆಡ್ಡಿ ಅವರು ಕಾನೂನು ಸಲಹೆಗಾರರಾಗಿದ್ದರು. ಜತೆಗೆ, ಇನ್ನೊಂದು ರಾಜಕೀಯ ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿಯ ಪರ ವಕೀಲರಾಗಿದ್ದರು ಎಂದು ದೂರಿದ್ದರು. ಹೀಗಾಗಿ, ಈ ಎಲ್ಲ ಅಂಶಗಳನ್ನು ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.