ಸಚಿವ ಅಶ್ವಿನಿ ವೈಷ್ಣವ್
ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ನಡೆಸುವ ಸಾಮಾಜಿಕ ಭದ್ರತಾ ಯೋಜನೆಗಳ ಮೂಲಕ ಎರಡು ವರ್ಷಗಳಲ್ಲಿ 3.5 ಕೋಟಿ ಉದ್ಯೋಗ ಸೃಷ್ಟಿಸಲು ₹99,446 ಕೋಟಿ ಮೊತ್ತದ ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಗೆ (ಇಎಲ್‌ಐ) ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.
‘ಈ ಯೋಜನೆಯು ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗಾರ್ಹತೆ ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸಲಿದೆ. ತಯಾರಿಕಾ ವಲಯ ಮತ್ತು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಿಗೆ ಪ್ರೋತ್ಸಾಹಧನ ನೀಡಲು ಈ ಯೋಜನೆ ಹೆಚ್ಚಿನ ಗಮನ ಹರಿಸಲಿದೆ. ಈ ಯೋಜನೆಯು ಉದ್ಯೋಗ ಸೃಷ್ಟಿ ಹೆಚ್ಚಿಸಲು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಪ್ರೋತ್ಸಾಹಧನ ಒದಗಿಸಲಿದೆ’ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರು ಎರಡು ಕಂತುಗಳಲ್ಲಿ ಗರಿಷ್ಠ ₹15,000 ವರೆಗೆ ಒಂದು ತಿಂಗಳ ವೇತನ ಪಡೆಯಲಿದ್ದಾರೆ. ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರಿಗೆ ಎರಡು ವರ್ಷಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
‘2024–25ರ ಕೇಂದ್ರ ಬಜೆಟ್‌ನಲ್ಲಿ 4.1 ಕೋಟಿ ಯುವಜನರಿಗೆ ಉದ್ಯೋಗ, ಕೌಶಲ ಮತ್ತು ಇತರ ಅವಕಾಶಗಳನ್ನು ಒದಗಿಸಲು ₹2 ಲಕ್ಷ ಕೋಟಿ ಅನುದಾನದೊಂದಿಗೆ ಈ ಪ್ರೋತ್ಸಾಹಧನ ಯೋಜನೆ ಘೋಷಿಸಲಾಗಿತ್ತು’ ಎಂದರು.
‘ಇಎಲ್‌ಐ ಯೋಜನೆಯಡಿ ಪ್ರೋತ್ಸಾಹಧನ ಪಡೆಯುವವರಲ್ಲಿ 1.92 ಕೋಟಿ ಫಲಾನುಭವಿಗಳು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದವರಾಗಿರುತ್ತಾರೆ. 2025ರ ಆಗಸ್ಟ್ 1ರಿಂದ 2027ರ ಜುಲೈ 31ರ ನಡುವೆ ಸೃಷ್ಟಿಯಾಗುವ ಉದ್ಯೋಗಗಳಿಗೆ ಈ ಯೋಜನೆಯ ಲಾಭ ಸಿಗಲಿದೆ’ ಎಂದರು.
‘ಈ ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದೆ. ಮೊದಲ ಭಾಗವು ಮೊದಲ ಬಾರಿಗೆ ಕೆಲಸಕ್ಕೆ ಸೇರಿದವರ ಮೇಲೆ ಗಮನ ಕೇಂದ್ರೀಕರಿಸಿದರೆ, ಎರಡನೇ ಭಾಗವು ಉದ್ಯೋಗದಾತರ ಮೇಲೆ ಗಮನ ಹರಿಸಲಿದೆ’ ಎಂದು ಅವರು ತಿಳಿಸಿದರು.
‘ಭಾಗ ಎ: ಇಪಿಎಫ್ಒನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದೆ. ಇದರ ಅಡಿಯಲ್ಲಿ ಗರಿಷ್ಠ ₹15,000 ಗಳವರೆಗೆ ಒಂದು ತಿಂಗಳ ಇಪಿಎಫ್ ವೇತನವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ₹1 ಲಕ್ಷವರೆಗಿನ ವೇತನ ಹೊಂದಿರುವ ಉದ್ಯೋಗಿಗಳು ಇದಕ್ಕೆ ಅರ್ಹರು. ಮೊದಲ ಕಂತನ್ನು 6 ತಿಂಗಳ ಸೇವೆಯ ನಂತರ ಮತ್ತು 2ನೇ ಕಂತನ್ನು 12 ತಿಂಗಳ ಸೇವೆಯ ನಂತರ ಪಾವತಿಸಲಾಗುತ್ತದೆ. ಉಳಿತಾಯ ಮನೋಭಾವ ಉತ್ತೇಜಿಸಲು, ಪ್ರೋತ್ಸಾಹಧನದ ಒಂದು ಭಾಗವನ್ನು ಠೇವಣಿ ಖಾತೆಯಲ್ಲಿ ನಿಗದಿತ ಅವಧಿಗೆ ಇಡಲಾಗುತ್ತದೆ’ ಎಂದು ಅವರು ವಿವರ ನೀಡಿದರು.
‘ಭಾಗ–ಬಿ: ಈ ಭಾಗವು ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸುತ್ತದೆಯಾದರೂ ತಯಾರಿಕಾ ವಲಯದ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸುತ್ತದೆ. ಗರಿಷ್ಠ ₹1 ಲಕ್ಷವರೆಗಿನ ವೇತನ ಹೊಂದಿರುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರು ಈ ಪ್ರೋತ್ಸಾಹಧನ ಪಡೆಯುತ್ತಾರೆ. ಕನಿಷ್ಠ ಆರು ತಿಂಗಳವರೆಗೆ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಸರ್ಕಾರವು ತಿಂಗಳಿಗೆ ₹3,000 ಪ್ರೋತ್ಸಾಹಧನ ನೀಡಲಿದೆ. ಇದನ್ನು ಎರಡು ವರ್ಷಗಳ ವರೆಗೆ ನೀಡಲಾಗುತ್ತದೆ. ತಯಾರಿಕಾ ವಲಯಕ್ಕೆ ಪ್ರೋತ್ಸಾಹಧನವನ್ನು 3 ಮತ್ತು 4ನೇ ವರ್ಷಗಳಿಗೂ ವಿಸ್ತರಿಸಲಾಗುವುದು. ಇದರಿಂದ 2.6 ಕೋಟಿ ಹೆಚ್ಚುವರಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.