ADVERTISEMENT

ಗುಜರಾತ್‌ನಲ್ಲಿ ಅತ್ಯಾಚಾರಿಗಳ ಬಿಡುಗಡೆ: ಪಿಎಂ ಮೋದಿ ವಿರುದ್ಧ ರಾಹುಲ್‌ ಕಿಡಿ

ಪಿಟಿಐ
Published 18 ಆಗಸ್ಟ್ 2022, 9:59 IST
Last Updated 18 ಆಗಸ್ಟ್ 2022, 9:59 IST
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ   

ನವದೆಹಲಿ: ರಾಷ್ಟ್ರದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಲ್ಲಿ ಅಪರಾಧಿಗಳನ್ನು ಬಿಜೆಪಿ ಬೆಂಬಲಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ಇಂತಹ ರಾಜಕಾರಣವನ್ನು ಮಾಡಲು ನಾಚಿಕೆಯಾಗುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಉನ್ನಾವೊ ಮತ್ತು ಹತ್ರಾಸ್‌ ಅತ್ಯಾಚಾರ ಪ್ರಕರಣಗಳು, ಜಮ್ಮು ಮತ್ತು ಕಾಶ್ಮೀರದ ಕಟುವಾ ಅತ್ಯಾಚಾರ ಪ್ರಕರಣ ಮತ್ತು ಇದೀಗ ಗುಜರಾತ್‌ನಲ್ಲಿ ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ತಪ್ಪಿತಸ್ಥರ ಬಿಡುಗಡೆ ಪ್ರಕರಣಗಳನ್ನು ಉದಾಹರಣೆ ನೀಡಿರುವ ರಾಹುಲ್‌ ಗಾಂಧಿ, ಬಿಜೆಪಿ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

2002ರಲ್ಲಿ ಗೋಧ್ರಾ ಗಲಭೆ ವೇಳೆ ಬಿಲ್ಕಿಸ್‌ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವರ ಕುಟುಂಬದ ಏಳು ಜನರನ್ನು ಹತ್ಯೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಬಿಲ್ಕಿಸ್‌ ಬಾನು ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ 11 ಜನ ತಪ್ಪಿತಸ್ಥರು ಎಂದು 2008ರ ಜ.21ರಂದು ವಿಶೇಷ ನ್ಯಾಯಾಲಯ ತೀರ್ಪು ನೀಡಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಪೊಲೀಸರು, ವೈದ್ಯರು ಸೇರಿದಂತೆ ಉಳಿದ ಏಳು ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇದೀಗ ಶಿಕ್ಷೆಗೊಳಪಟ್ಟಿದ್ದ ಎಲ್ಲ 11 ಜನ ಅಪರಾಧಿಗಳನ್ನು ಗುಜರಾತ್‌ ಸರ್ಕಾರ ಬಿಡುಗಡೆ ಮಾಡಿದೆ.

'ಉನ್ನಾವೊ ಪ್ರಕರಣದಲ್ಲಿ ಬಿಜೆಪಿ ಶಾಸಕರೊಬ್ಬರ ರಕ್ಷಣೆಯ ಕೆಲಸ ಮಾಡಲಾಯಿತು. ಕಟುವಾ ಪ್ರಕರಣದಲ್ಲಿ ಅತ್ಯಾಚಾರಿಗಳ ಪರವಾಗಿ ಅಭಿಯಾನಗಳು ನಡೆದವು. ಹತ್ರಾಸ್‌ ಪ್ರಕರಣದಲ್ಲಿ ಸರ್ಕಾರ ಅತ್ಯಾಚಾರಿಗಳ ಪರವಾಗಿ ನಿಂತಿತು. ಗುಜರಾತ್‌ನಲ್ಲಿ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದಲ್ಲದೆ ಅವರನ್ನು ಗೌರವಿಸಲಾಗಿದೆ. ಅಪರಾಧಿಗಳನ್ನು ಬೆಂಬಲಿಸುವ ಇಂತಹ ಘಟನೆಗಳು ಬಿಜೆಪಿ ಮಹಿಳೆಯರ ಮೇಲೆ ಎಂತಹ ಮನಸ್ಥಿತಿಯನ್ನು ಇಟ್ಟುಕೊಂಡಿದೆ ಎಂಬುದನ್ನು ತೋರಿಸುತ್ತವೆ' ಎಂದು ರಾಹುಲ್‌ ಗಾಂಧಿ ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.

ADVERTISEMENT

'ಇಂತಹ ರಾಜಕಾರಣವನ್ನು ಮಾಡಲು ನಾಚಿಕೆಯಾಗುವುದಿಲ್ಲವೇ ಪ್ರಧಾನಿ ನರೇಂದ್ರ ಮೋದಿ ಅವರೇ' ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.