ADVERTISEMENT

ಕಾಶ್ಮೀರ: ಶಿಥಿಲಗೊಂಡಿದ್ದ ಬಸ್ ನಿಲ್ದಾಣವನ್ನು ‘ಬೀದಿ ಗ್ರಂಥಾಲಯ’ವನ್ನಾಗಿಸಿದ ಸೇನೆ

ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಅನುಕೂಲ

ಪಿಟಿಐ
Published 7 ಮಾರ್ಚ್ 2021, 12:53 IST
Last Updated 7 ಮಾರ್ಚ್ 2021, 12:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅನಂತ್‌ನಾಗ್: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ದೇವಿಪೋರಾ–ಚಿಟ್ಟಿಸಿಂಗ್‌ಪೋರಾ ಜಂಕ್ಷನ್‌ನಲ್ಲಿ ಶಿಥಿಲಗೊಂಡಿದ್ದ ಬಸ್ ನಿಲ್ದಾಣವು ಭಾರತೀಯ ಸೇನೆಯ ಶ್ರಮದಿಂದಾಗಿ ‘ಬೀದಿ ಗ್ರಂಥಾಲಯ’ವಾಗಿ ರೂಪುಗೊಂಡಿದೆ.

ಸೇನೆಯ 18 ರಾಷ್ಟ್ರೀಯ ರೈಫಲ್ಸ್ ಪಡೆಯು ಫೆಬ್ರುವರಿ ಕೊನೆಯ ವಾರದಲ್ಲಿ ಸ್ಥಾಪಿಸಿರುವ ಈ ಗ್ರಂಥಾಲಯವು ರಾಣಿಪುರ, ಚಿಟ್ಟಿಸಿಂಗ್‌ಪೋರಾ,ದೇವಿಪೋರಾ ಗ್ರಾಮಗಳ ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

2016ರಲ್ಲಿ ಈ ಬಸ್ ನಿಲ್ದಾಣವನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದರು.‘ಗ್ರಂಥಾಲಯಗಳು ಕಲ್ಪನೆಗೆ ಇಂಧನ ನೀಡುವ ಶಕ್ತಿಯನ್ನು ಸಂಗ್ರಹಿಸುತ್ತವೆ. ಅವು ಜಗತ್ತಿಗೆ ಕಿಟಕಿಗಳನ್ನು ತೆರೆಯುತ್ತವೆ. ಹೊಸದನ್ನು ಅನ್ವೇಷಿಸಲು, ಸಾಧಿಸಲು ಅವು ನಮಗೆ ಸ್ಫೂರ್ತಿ ನೀಡುತ್ತವೆ’ ಎನ್ನುವ ಅಮೆರಿಕದ ಪ್ರಸಿದ್ಧ ಕಾದಂಬರಿಕಾರ ಸಿಡ್ನಿ ಶೆಲ್ಡನ್ ಅವರ ಹೇಳಿಕೆಯೇ ಈ ಗ್ರಂಥಾಲಯ ಸ್ಥಾಪನೆಗೆ ಪ್ರೇರಣೆಯಾಗಿದೆ.

ADVERTISEMENT

‘ಉನ್ನತ ವ್ಯಾಸಂಗ ಮಾಡುವ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗಾಗಿ ಅನುಕೂಲವಾಗಲೆಂದು ರೂಪಿಸಲಾಗಿರುವ ಈ ಗ್ರಂಥಾಲಯದಲ್ಲಿ, ಪ್ರಾಥಮಿಕ ಶಾಲೆಯ ಮಕ್ಕಳು ತಮ್ಮ ಅಭಿರುಚಿಗೂ ಪೂರಕವಾಗಿರುವ ಪುಸ್ತಕಗಳನ್ನು ಬೇಕೆಂದು 18 ಆರ್‌ ಆರ್ ಕಮಾಡಿಂಗ್ ಅಧಿಕಾರಿ ಲೆ. ಕರ್ನಲ್ ರೋಹಿತ್ ಝಾ ಅವರಿಗೆ ಬೇಡಿಕೆ ಇಟ್ಟಿದ್ದರು. ಅಂತೆಯೇ ಮಕ್ಕಳಿಗೆ ಬೇಕಾದ ಕಾಮಿಕ್ಸ್ ಪುಸ್ತಕಗಳನ್ನು ಇಡಲು ರೋಹಿತ್ ಝಾ ಅವರು ತಮ್ಮ ಸಿಬ್ಬಂದಿಗೆ ಸೂಚಿಸಿದ್ದರು. ಹಾಗಾಗಿ, ಬೆಳಿಗ್ಗೆ ತೆರೆಯಲಾಗುವ ಈ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಲು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳೂ ಬರುತ್ತಿದ್ದಾರೆ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಬುಕ್ಸ್ ಆಫ್ ಇಂಡಿಯಾ’ದ ಜೊತೆಗೆ ಸೇನೆಯು ಒಪ್ಪಂದ ಮಾಡಿಕೊಂಡಿದ್ದು, ಅಲ್ಲಿಂದಲೇ ಪುಸ್ತಕಗಳು ಪೂರೈಕೆಯಾಗುತ್ತಿವೆ. ಇದೇ ಮಾದರಿಯಲ್ಲಿ ಇತರ ಸ್ಥಳಗಳಲ್ಲೂ ಬೀದಿ ಗ್ರಂಥಾಲಯಗಳನ್ನು ತೆರೆಯಲು ಸೇನೆಯು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.