ADVERTISEMENT

ಅರುಣಾಚಲ ಪ್ರದೇಶ ಗಡಿಯಲ್ಲಿ ‘ಎಂ–777’ ಹೊವಿಟ್ಜರ್‌ಗಳ ನಿಯೋಜನೆ

ಪಿಟಿಐ
Published 8 ಸೆಪ್ಟೆಂಬರ್ 2022, 11:39 IST
Last Updated 8 ಸೆಪ್ಟೆಂಬರ್ 2022, 11:39 IST
M-777 ಹೊವಿಟ್ಜರ್ (ಸಂಗ್ರಹ ಚಿತ್ರ) 
M-777 ಹೊವಿಟ್ಜರ್ (ಸಂಗ್ರಹ ಚಿತ್ರ)    

ನಾಮ್‌ಸಾಯಿ, ಅರುಣಾಚಲಪ್ರದೇಶ: ರಾಜ್ಯಕ್ಕೆ ಹೊಂದಿಕೊಂಡಿರುವ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯ ಪರ್ವತಪ್ರದೇಶಗಳಲ್ಲಿರುವ ಗಡಿಠಾಣೆಗಳಲ್ಲಿ ಗಮನಾರ್ಹ ಸಂಖ್ಯೆಯ ‘ಎಂ–777’ ಹೊವಿಟ್ಜರ್‌ಗಳನ್ನು ನಿಯೋಜಿಸಲಾಗಿದೆ ಎಂದು ಸೇನಾಧಿಕಾರಿಗಳು ಗುರುವಾರ ಹೇಳಿದ್ದಾರೆ.

‘ಈ ಹೊವಿಟ್ಜರ್‌ಗಳ ತೂಕ ಬಹಳ ಕಡಿಮೆ ಇದ್ದು, ಅವುಗಳನ್ನು ಸುಲಭವಾಗಿ ಸಾಗಿಸಬಹುದಾಗಿದೆ. ಚಿನೂಕ್‌ ಹೆಲಿಕಾಪ್ಟರ್‌ಗಳನ್ನು ಬಳಸಿ‘ಎಂ–777’ ಹೊವಿಟ್ಜರ್‌ಗಳನ್ನು ಕ್ಷಿಪ್ರವಾಗಿ ಸಾಗಿಸಬಹುದಾಗಿದೆ’ ಎಂದಿದ್ದಾರೆ.

ಭಾರವಾದ ಶಸ್ತ್ರಾಸ್ತ್ರಗಳನ್ನು ಪರ್ವತ ಪ್ರದೇಶಗಳಲ್ಲಿನ ಗಡಿಠಾಣೆಗಳಿಗೆ ಸಾಗಿಸುವುದು ಸವಾಲಿನ ಕೆಲಸವೇ ಆಗಿತ್ತು. ಈಗ ಹೊವಿಟ್ಜರ್‌ಗಳ ನಿಯೋಜನೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಂತಾಗಿದೆ ಎಂದೂ ಹೇಳಿದ್ದಾರೆ.

ADVERTISEMENT

‘ರಾಜ್ಯದ ಗಡಿ ಪ್ರದೇಶದಲ್ಲಿ ವಾಯುಪಡೆಯ ಬಲವನ್ನು ಸಹ ಹೆಚ್ಚಿಸಲಾಗಿದೆ. ಮಾನವರಹಿತ ಯುದ್ಧವಿಮಾನಗಳು, ಕಣ್ಗಾವಲು ಸಾಧನಗಳನ್ನು ಹೊತ್ತ ವಿಮಾನಗಳನ್ನು ಸಹ ನಿಯೋಜಿಸಲಾಗಿದ್ದು, ಈ ಕ್ರಮಗಳು ಭಾರತದ ಯುದ್ಧಸನ್ನದ್ಧತೆಯನ್ನು ಹೆಚ್ಚಿಸಿವೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಚೀನಾದೊಂದಿಗೆ ಸಂಘರ್ಷ ಏರ್ಪಟ್ಟ ನಂತರ ಲಡಾಖ್‌ಗೆ ಹೊಂದಿಕೊಂಡ ಗಡಿಯ ಸೂಕ್ಷ್ಮ ಪ್ರದೇಶಗಳಲ್ಲಿ ‘ಎಂ–777’ ಹೊವಿಟ್ಜರ್‌ಗಳನ್ನು ನಿಯೋಜಿಸಲಾಗಿದೆ. ಈಗ ಅರುಣಾಚಲಪ್ರದೇಶಕ್ಕೆ ಹೊಂದಿರುವ ಗಡಿಯಲ್ಲಿಯೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಮೂಲಕ ಸೇನೆಗೆ ಮತ್ತಷ್ಟು ಬಲತುಂಬಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.