ADVERTISEMENT

ರಾಜಕೀಯ ಸ್ವರೂಪ ಪಡೆದ ಅರ್ನಾಬ್ ಮೇಲಿನ ದಾಳಿ

Arnab Goswami's car allegedly attacked in Mumbai; two held

ಪಿಟಿಐ
Published 23 ಏಪ್ರಿಲ್ 2020, 20:00 IST
Last Updated 23 ಏಪ್ರಿಲ್ 2020, 20:00 IST
ಅರ್ನಬ್‌ ಗೋಸ್ವಾಮಿ
ಅರ್ನಬ್‌ ಗೋಸ್ವಾಮಿ   

ನವದೆಹಲಿ: ಪತ್ರಕರ್ತ ಅರ್ನಾಬ್‌ ಗೋಸ್ವಾಮಿ ಅವರ ಕಾರಿನ ಮೇಲೆ ನಡೆದ ದಾಳಿಯ ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿವೆ.

ದಾಳಿಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಖಂಡಿಸಿದ್ದು, ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿದ್ದಾರೆ.

‘ಕಾಂಗ್ರೆಸ್ ಆಡಳಿತ ರಾಜ್ಯದ ಮುಖ್ಯಮಂತ್ರಿಗಳು ಅರ್ನಾಬ್ ವಿರುದ್ಧ ಸಾರ್ವಜನಿಕವಾಗಿ ಬೆದರಿಕೆ ಹಾಕಿದ ಬಳಿಕ ದಾಳಿ ನಡೆದಿರುವುದು ಆಘಾತಕಾರಿ. ವಾಕ್ ಸ್ವಾತಂತ್ರ್ಯಕ್ಕಾಗಿ ಪತ್ರಕರ್ತರನ್ನು ಸಾರ್ವಜನಿಕವಾಗಿ ದೂಷಿಸುತ್ತಿರುವುದು ನೋಡಿ ಬೇಸರವಾಯಿತು. ತುರ್ತು ಪರಿಸ್ಥಿತಿಯನ್ನು ಹೇರಿದ ಮತ್ತು ಮುಕ್ತ ವಾಕ್‌ ಸ್ವಾತಂತ್ರ್ಯವನ್ನು ಹಾಳು ಮಾಡುವ ಶ್ರೀಮಂತ ಪರಂಪರೆಯನ್ನು ಕಾಂಗ್ರೆಸ್ ಮುಂದುವರಿಸಿದೆ’ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಇಂಥ ಬ್ರ್ಯಾಂಡ್ ಆ್ಯಂಕರ್‌ಗಳನ್ನು (ನಿರೂಪಕರನ್ನು) ಪ್ರಧಾನಿ ಮತ್ತು ಬಿಜೆಪಿ ಶ್ಲಾಘಿಸುತ್ತಿರುವುದು ತೀವ್ರ ನಾಚಿಕೆಗೇಡಿನ ಸಂಗತಿ’ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಟೀಕಿಸಿದ್ದಾರೆ.

ಈ ನಡುವೆ ದೆಹಲಿಯ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿ ಅರ್ನಾಬ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿದ್ಯಾರ್ಥಿ ಸಂಘ ಖಂಡನೆ: ಹಿಂದೂ ಕಾಲೇಜಿನ ಹಳೆಯ ವಿದ್ಯಾರ್ಥಿ ಅರ್ನಾಬ್ ಮೇಲಿನ ಹಲ್ಲೆಯನ್ನು ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘ ಖಂಡಿಸಿದ್ದು,‘ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ’ ಎಂದು ಹೇಳಿದೆ.

ಅರ್ನಾಬ್ ವಿಡಿಯೊ:ದಾಳಿಯ ನಂತರ ವಿಡಿಯೊವೊಂದನ್ನು ಅರ್ನಾಬ್ ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ದಾಳಿಕೋರರನ್ನು ಯುವ ಕಾಂಗ್ರೆಸ್‌ನ ಕಾರ್ಯಕರ್ತರೆಂದು ತಮ್ಮ ಭದ್ರತಾ ಸಿಬ್ಬಂದಿ ಹೇಳಿದ್ದಾಗಿ ಅರ್ನಾಬ್‌ ಹೇಳಿಕೊಂಡಿದ್ದಾರೆ.

ಆದರೆ, ದಾಳಿಕೋರರು ಯುವ ಕಾಂಗ್ರೆಸ್‌ನ ಕಾರ್ಯಕರ್ತರು ಎಂಬುದನ್ನು ಪೊಲೀಸರಾಗಲೀ, ಯುವ ಕಾಂಗ್ರೆಸ್ ಘಟಕವಾಗಲೀ ಇನ್ನೂ ದೃಢಪಡಿಸಿಲ್ಲ.

ಅರ್ನಾಬ್, ವಾಹಿನಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

‘ಕಾರ್ಯಕ್ರಮವೊಂದರಲ್ಲಿ ಅರ್ನಾಬ್ ಗೋಸ್ವಾಮಿ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ನಿಯಮ–1994ರ ನಿಬಂಧನೆಗಳನ್ನು ಉಲ್ಲಂಘಿಸಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅರ್ನಾಬ್ ಗೋಸ್ವಾಮಿ ಮತ್ತು ಅವರ ಚಾನೆಲ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಮಹಿಳಾ ಕಾಂಗ್ರೆಸ್‌ ಮುಖ್ಯಸ್ಥೆ ಸುಶ್ಮಿತಾ ದೇವ್ ಪತ್ರ ಬರೆದಿದ್ದಾರೆ.

ದಾಳಿ: ಆರೋಪಿಗಳ ಬಂಧನ

ಪತ್ರಕರ್ತ ಅನಾರ್ಬ್ ಗೋಸ್ವಾಮಿ ಅವರ ಕಾರಿನ ಮೇಲೆ ದಾಳಿ ನಡೆಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

‘ಕೆಲಸ ಮುಗಿಸಿಕೊಂಡು ಅನಾರ್ಬ್ ತಮ್ಮ ಪತ್ನಿ ಜೊತೆಗೆ ಗುರುವಾರ ಮುಂಜಾನೆ ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಮೋಟರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರನ್ನು ಅಡ್ಡಗಟ್ಟಿ ಕಿಟಕಿ ಗಾಜನ್ನು ಒಡೆಯಲು ಯತ್ನಿಸಿ, ಕಾರಿನ ಮೇಲೆ ಇಂಕ್ ಚೆಲ್ಲಿದ್ದರು’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಅರ್ನಾಬ್ ಅವರ ಭದ್ರತಾ ಸಿಬ್ಬಂದಿ ದಾಳಿಕೋರರನ್ನು ಹಿಡಿದು, ಎನ್.ಎಂ. ಜೋಶಿ ಮಾರ್ಗದ ಪೊಲೀಸರ ವಶಕ್ಕೆ ನೀಡಿದ್ದಾರೆ’ ಎಂದುಪೊಲೀಸರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.