ADVERTISEMENT

ಕಾಶ್ಮೀರದ ಅಭಿವೃದ್ಧಿಗೆ 370ನೇ ವಿಧಿ ಅಡಚಣೆಯಾಗಿತ್ತು: ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 20 ಫೆಬ್ರುವರಿ 2024, 10:42 IST
Last Updated 20 ಫೆಬ್ರುವರಿ 2024, 10:42 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವು ರಾಜ್ಯದ ಅಭಿವೃದ್ಧಿಗೆ ದೊಡ್ಡ ಅಡಚಣೆಯಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು ₹32,000 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರವು ಜನರ ಮನೆ ಬಾಗಿಲಿಗೆ ತಲುಪಿದೆ. ಇದುವೇ ಮೋದಿಯ ಗ್ಯಾರಂಟಿಯಾಗಿದ್ದು, ಇದು ಮುಂದುವರಿಯಲಿದೆ’ ಎಂದು ತಿಳಿಸಿದ್ದಾರೆ.

370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ಧತಿಯ ನಂತರ ಕೇಂದ್ರಾಡಳಿತ ಪ್ರದೇಶವು ಎಲ್ಲಾ ವಲಯಗಳು ಹಾಗೂ ವರ್ಗಗಳಲ್ಲಿಯೂ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿತ್ತು.

‘ಸಂವಿಧಾನದ 370ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಅಭಿವೃದ್ಧಿಗೆ ದೊಡ್ಡ ತೊಡಕಾಗಿತ್ತು. ಬಿಜೆಪಿ ಸರ್ಕಾರವು ಅದನ್ನು ರದ್ದುಗೊಳಿಸಿದೆ. ಕೇವಲ ಒಂದು ಕುಟುಂಬದ ಕಲ್ಯಾಣವು ಯಾವ ಸರ್ಕಾರದ ಆದ್ಯತೆ ಆಗಿರುತ್ತದೆಯೋ, ಆ ಸರ್ಕಾರ ಜನಸಾಮಾನ್ಯರ ಕಲ್ಯಾಣದ ಕುರಿತು ಯೋಚಿಸಲು ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರ ಈಗ ವಂಶಪಾರಂಪರೆಯ ಆಡಳಿತದಿಂದ ಮುಕ್ತಿಗೊಂಡಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಅಭಿವೃದ್ಧಿ ಹೊಂದಿದ ಭಾರತ ಎಂದರೆ ಅಭಿವೃದ್ಧಿ ಹೊಂದಿದ ಜಮ್ಮು ಮತ್ತು ಕಾಶ್ಮೀರ ಎಂದರ್ಥ’ ಎಂದು ಮೋದಿ ತಿಳಿಸಿದ್ದಾರೆ.

370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ಧತಿಯ ನಂತರ ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಜನರಿಗೆ ಮೊದಲ ಬಾರಿಗೆ ಸಂವಿಧಾನದಲ್ಲಿ ಉಲ್ಲೇಖಿಸಿರುವ ಸಾಮಾಜಿಕ ನ್ಯಾಯದ ಭರವಸೆ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.