ಅರುಣ್ ಗವಳಿ
ಮುಂಬೈ: ಕೊಲೆ ಪ್ರಕರಣವೊಂದರಲ್ಲಿ ನಾಗಪುರ ಕೇಂದ್ರ ಕಾರಾಗೃಹದಲ್ಲಿ 17 ವರ್ಷಗಳಿಂದ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದ ಪಾತಕಿ ಹಾಗೂ ರಾಜಕಾರಣಿ ಅರುಣ್ ಗವಳಿ (76) ಬುಧವಾರ ಜೈಲಿನಿಂದ ಬಿಡುಗಡೆಯಾದರು.
ಮುಂಬೈನ ಶಿವಸೇನಾ ಕಾರ್ಪೊರೇಟರ್ ಕಮಲಾಕರ್ ಜಾಮಸಾಂಡೇಕರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗವಳಿ ಅವರಿಗೆ ಸುಪ್ರೀಂ ಕೋರ್ಟ್ ಕಳೆದ ವಾರ ಜಾಮೀನು ಮಂಜೂರು ಮಾಡಿತ್ತು. 2007ರಲ್ಲಿ ನಡೆದಿದ್ದ ಪ್ರಕರಣ ಅದು.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠವು ಜಾಮೀನು ನೀಡಿದೆ. ಜೈಲಿನ ಹೊರಗೆ ಗವಳಿ ಅವರ ಕುಟುಂಬದ ಸದಸ್ಯರು, ವಕೀಲರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿದ್ದರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು. ನಾಗ್ಪುರ ವಿಮಾನ ನಿಲ್ದಾಣದಿಂದ ಅವರು ಮುಂಬೈಗೆ ಪ್ರಯಾಣಿಸಿದರು.
‘ಡ್ಯಾಡಿ’ ಎಂದೇ ಜನಪ್ರಿಯರಾಗಿದ್ದ ಗವಳಿ, ಅಖಿಲ ಭಾರತೀಯ ಸೇನಾ (ಎಬಿಎಸ್) ಸ್ಥಾಪಿಸಿದ್ದರು. 2004ರಿಂದ 2009ರ ಅವಧಿಯಲ್ಲಿ ಮುಂಬೈನ ಚಿಂಚಪೋಕಲಿ ಕ್ಷೇತ್ರದ ಶಾಸಕರಾಗಿದ್ದರು. 2012ರಲ್ಲಿ ಮುಂಬೈನ ಸೆಷನ್ಸ್ ಕೋರ್ಟ್ ಅವರಿಗೆ ಜೀವಾವಧಿ ಶಿಕ್ಷೆ, ₹17 ಲಕ್ಷ ದಂಡ ವಿಧಿಸಿತ್ತು.
10 ಕೊಲೆ ಪ್ರಕರಣ ಸೇರಿ ಅವರ ವಿರುದ್ಧ 46 ಪ್ರಕರಣಗಳು ದಾಖಲಾಗಿವೆ ಎಂದು ಮಹಾರಾಷ್ಟ್ರ ಸರ್ಕಾರ ವಾದಿಸಿತ್ತು. ಎಂಬತ್ತು, ತೊಂಬತ್ತರ ದಶಕದಲ್ಲಿ ಮುಂಬೈನಲ್ಲಿ ದಾವೂದ್ ಇಬ್ರಾಹಿಂ ಗ್ಯಾಂಗ್‌ಗೆ ಸಮಾಂತರವಾಗಿ ಅಪರಾಧಿಗಳ ತಂಡವೊಂದನ್ನು ಗವಳಿ ಕಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.