ADVERTISEMENT

ನಾಯಕತ್ವ ಬದಲಾವಣೆ: ಹೇಳಿಕೆ ನೀಡದಂತೆ ಹೈಕಮಾಂಡ್‌ ತಾಕೀತು

ಮುಂದಿನ ವಾರ ರಾಜ್ಯಕ್ಕೆ ಅರುಣ್‌ ಸಿಂಗ್‌ ಭೇಟಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 21:58 IST
Last Updated 9 ಜೂನ್ 2021, 21:58 IST
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ   

ನವದೆಹಲಿ: ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಶಾಸಕರು, ಸಚಿವರನ್ನು ಒಳಗೊಂಡುಪಕ್ಷದ ಯಾವೊಬ್ಬ ಮುಖಂಡರೂ ಹೇಳಿಕೆ ನೀಡಬಾರದು’ ಎಂದು ಬಿಜೆಪಿ ಹೈಕಮಾಂಡ್‌ ತಾಕೀತು ಮಾಡಿದೆ.

‘ಹೈಕಮಾಂಡ್‌ ಬಯಸಿದಲ್ಲಿ ನಾಯಕತ್ವ ಬಿಟ್ಟುಕೊಡುವೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಇತ್ತೀಚೆಗೆ ಹೇಳಿಕೆ ನೀಡಿರುವ ಬೆನ್ನಲ್ಲೇ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ವರಿಷ್ಠರು, ಸಚಿವರು ಮತ್ತು ಶಾಸಕರಿಗೆ ಮೌಖಿಕ ಎಚ್ಚರಿಕೆ ನೀಡುವಂತೆ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಸೂಚಿಸಿದ್ದಾರೆ.

ದೂರವಾಣಿ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೂ ಬುಧವಾರ ಮಾತನಾಡಿರುವ ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳಿಗೆ ಪುಷ್ಟಿ ನೀಡುವ ರೀತಿಯಲ್ಲಿ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ADVERTISEMENT

‘ಸಚಿವ ಸಿ.ಪಿ. ಯೋಗೇಶ್ವರ್‌, ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್, ಅರವಿಂದ್‌ ಬೆಲ್ಲದ್‌ ಮತ್ತಿತರರು ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿದ್ದರೂ ಅವರ ವಿರುದ್ಧ ಮುಖಂಡರು ಶಿಸ್ತು ಕ್ರಮ ಕೈಗೊಳ್ಳದಿರುವುದು ಬೇಸರ ಮೂಡಿಸಿದೆ’ ಎಂದು ಯಡಿಯೂರಪ್ಪ ಅವರು ಈ ಮಾತುಕತೆ ವೇಳೆ ದೂರಿದ್ದಾರೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

ಪಕ್ಷದ ಶಾಸಕರು ಸಹಿ ಸಂಗ್ರಹದಲ್ಲಿ ತೊಡಗಿದಲ್ಲಿ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇರುವುದರಿಂದ ಅಂಥ ಕಾರ್ಯಕ್ಕೆ ಅವಕಾಶ ನೀಡಕೂಡದು ಎಂದೂ ಅಧ್ಯಕ್ಷ ಕಟೀಲ್‌ ಅವರಿಗೆ ತಾಕೀತು ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಅರುಣ್‌ ಸಿಂಗ್‌ ಅವರು ಮುಂದಿನ ವಾರ ಮೂರು ದಿನಗಳ ಅವಧಿಗೆ ರಾಜ್ಯಕ್ಕೆ ಭೇಟಿ ನೀಡಲಿರುವ ಸಾಧ್ಯತೆ ಇದೆ. ಈ ಸಂದರ್ಭ ಮುಖಂಡರೊಂದಿಗೆ ಸಭೆ ನಡೆಸಿ, ಪಕ್ಷದಲ್ಲಿನ ಆಂತರಿಕ ಗೊಂದಲಗಳ ನಿವಾರಣೆಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.