ADVERTISEMENT

ಅರುಣಾಚಲಪ್ರದೇಶ ಉದ್ವಿಗ್ನ: ಉಪಮುಖ್ಯಮಂತ್ರಿ ನಿವಾಸ ಎದುರು ಪ್ರತಿಭಟನಾಕಾರರ ದಾಂದಲೆ

ಪಿಟಿಐ
Published 24 ಫೆಬ್ರುವರಿ 2019, 12:44 IST
Last Updated 24 ಫೆಬ್ರುವರಿ 2019, 12:44 IST
   

ಇಟಾನಗರ್: ರಾಜ್ಯದ ಹೊರಗಿರುವ ಬುಡಕಟ್ಟು ಜನಾಂಗಕ್ಕೆ ಸೇರದವರಿಗೆಕಾಯಂ ನಿವಾಸಿ ಸ್ಥಾನಮಾನ ನೀಡುವ ನಿರ್ಧಾರವನ್ನು ಖಂಡಿಸಿ ಅರುಣಾಚಲ ಪ್ರದೇಶದ ರಾಜಧಾನಿಯಲ್ಲಿ ಹಿಂಸಾಚಾರ ನಡೆದಿದೆ.

ಪ್ರತಿಭಟನೆ ನಡೆಸುತ್ತಿರುವ ಗುಂಪೊಂದು ಉಪ ಮುಖ್ಯಮಂತ್ರಿ ಚೌಮಾ ಮೇನ್ ಅವರ ಖಾಸಗಿ ನಿವಾಸಕ್ಕೆ ನುಗ್ಗಿ ದಾಂದಲೆ ಮಾಡಿದ್ದಾರೆ.

ಮುಖ್ಯಮಂತ್ರಿ ಪೇಮಾ ಖಂಡು ಮನೆಯ ಮೇಲೆ ದಾಂದಲೆ ನಡೆಸಲು ಪ್ರತಿಭಟನಾಕಾರರು ಯತ್ನಿಸಿದ್ದು, ಭದ್ರತಾ ಸಿಬ್ಬಂದಿಗಳು ಪ್ರತಿಭಟನಾಕಾರರನ್ನು ಅಲ್ಲಿಂದ ಚದುರಿಸಿದ್ದರು.

ADVERTISEMENT

ಪ್ರತಿಭಟನಾಕಾರರನ್ನು ಓಡಿಸಲು ಪೊಲೀಸರು ಗುಂಡು ಹಾರಿಸಿದ್ದು, ಇದರಲ್ಲಿ ಓರ್ವನಿಗೆ ಗಾಯಗಳಾಗಿವೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ.

ಇಟಾನಗರ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಕರ್ಫ್ಯೂ ಹೇರಿದ್ದು ಸೇನಾ ಪಡೆಯನ್ನು ನಿಯೋಜಿಸಲಾಗಿದೆ.

ಇಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಶಾಂತಿ ಕಾಪಾಡಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರಾಜ್ಯ ಗೃಹ ಸಚಿವ ಕುಮಾರ್ ವಾಲಿ ಹೇಳಿದ್ದಾರೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.

ಏನಿದು ಸಮಸ್ಯೆ?
ನಾಮ್ಸಾಯಿ ಮತ್ತು ಚನಂಗ್‍ಲಾಂಗ್ ಜಿಲ್ಲೆಯಲ್ಲಿ ವಾಸವಿರುವ ಅರುಣಾಚಲ ಪ್ರದೇಶದ ಹೊರಗಿರುವ 6 ಸಮುದಾಯಗಳಿಗೆ ಕಾಯಂ ನಿವಾಸಿ ಸ್ಥಾನಮಾನ ಪ್ರಮಾಣಪತ್ರ (ಪಿಆರ್‌ಸಿ) ನೀಡುವುದನ್ನು ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅರುಣಾಚಲದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ 18 ಸ್ಥಳೀಯ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು ಶುಕ್ರವಾರ 48 ಗಂಟೆಗಳ ಕಾಲ ಬಂದ್‍ಗೆ ಕರೆ ನೀಡಲಾಗಿತ್ತು. ಪ್ರತಿಭಟನೆಗಳು ನಡೆಯುತ್ತಿರುವುದರಿಂದ ಪಿಆರ್‌ಸಿ ಬಗ್ಗೆ ನಿರ್ಧಾರ ಪ್ರಕಟವನ್ನು ಸರ್ಕಾರ ಮುಂದೂಡಿತ್ತು.

ಆದರೆ ಶನಿವಾರ ಪೊಲೀಸರು ಗುಂಡು ಹಾರಾಟದ ವೇಳೆ ಸಾವಿಗೀಡಾಗಿದ್ದ ಪ್ರತಿಭಟನಾಕಾರನಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು ಮುಂದುವರಿದಿವೆ.

ಪರಿಸ್ಥಿತಿ ನಿಯಂತ್ರಣಕ್ಕಾಗಿ ಶನಿವಾರ ಇಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಇಟಾನಗರ್ ಮತ್ತು ನಹರ್ ಲಾಗುನ್‍ನಲ್ಲಿ ಸೇನಾ ಪಡೆ ಫ್ಲ್ಯಾಗ್ ಮಾರ್ಚ್ ನಡೆಸಿದೆ. ಈ ಎರಡು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ.

ಮಾರುಕಟ್ಟೆ, ಪೆಟ್ರೋಲ್ ಪಂಪ್, ಅಂಗಡಿಗಳು ಮುಚ್ಚಿದ್ದು, ಹೆಚ್ಚಿನ ಎಟಿಎಂಗಳಲ್ಲಿ ನಗದು ಅಭಾವ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.