
ಅರುಂಧತಿ ರಾಯ್
ನವದೆಹಲಿ: ಲೇಖಕಿ ಅರುಂಧತಿ ರಾಯ್ ಅವರ ‘ಮದರ್ ಮೇರಿ ಕಮ್ಸ್ ಟು ಮಿ’ ಪುಸ್ತಕದ ಮಾರಾಟ, ಪ್ರಸಾರ ಮತ್ತು ಪ್ರದರ್ಶನವನ್ನು ನಿಷೇಧಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಈ ಪುಸ್ತಕದ ಮುಖಪುಟದಲ್ಲಿ ಲೇಖಕಿ ‘ಬೀಡಿ’ ಅಥವಾ ‘ಸಿಗರೇಟ್’ ಸೇದುತ್ತಿರುವ ಚಿತ್ರವನ್ನು ಪ್ರಕಟಿಸಲಾಗಿದ್ದು, ಅದು ಕಾನೂನಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಜಾಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜಸಿಂಹನ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ ವಜಾಗೊಳಿಸಿದೆ.
‘ಪ್ರಸಿದ್ಧ ಲೇಖಕಿ ಆಗಿರುವ ಅರುಂಧತಿ ರಾಯ್ ಅವರು ಅಂತಹ ವಿಷಯಗಳನ್ನು ಪ್ರಚಾರ ಮಾಡಿಲ್ಲ. ಅಲ್ಲದೆ ಪುಸ್ತಕದ ಚಿತ್ರವು ನಗರದ ಯಾವುದೇ ಹೋರ್ಡಿಂಗ್‌ನಲ್ಲಿ ಇಲ್ಲ. ಪುಸ್ತಕವನ್ನು ತೆಗೆದುಕೊಂಡು ಓದುವವರು ಮಾತ್ರ ಅದನ್ನು ನೋಡುತ್ತಾರೆ’ ಎಂದು ಸಿಜೆಐ ಹೇಳಿದರು.
‘ಲೇಖಕರು ಮತ್ತು ಪ್ರಕಾಶಕ ಸಂಸ್ಥೆ ಪೆಂಗ್ವಿನ್ ಹಮಿಶ್ ಹ್ಯಾಮಿಲ್ಟನ್, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ–2003ರ ಕಲಂ 5 ಅನ್ನು ಉಲ್ಲಂಘಿಸಿಲ್ಲ’ ಎಂದೂ ಪೀಠ ಹೇಳಿತು.
ಹೀಗಾಗಿ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಸೂಕ್ತ ಕಾರಣವಿಲ್ಲ ಎಂದು ಪೀಠ ತಿಳಿಸಿತು. ಇದು ಲೇಖಕಿ ಅರುಂಧತಿ ರಾಯ್ ಅವರ ಆತ್ಮಚರಿತ್ರೆಯ ಪುಸ್ತಕವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.