ADVERTISEMENT

ಶ್ರೀನಗರ: ಅಮರನಾಥ ಯಾತ್ರೆ ಸಿದ್ಧತೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 15:50 IST
Last Updated 18 ಫೆಬ್ರುವರಿ 2022, 15:50 IST

ಶ್ರೀನಗರ: ಕೋವಿಡ್‌ನಿಂದಾಗಿ ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ ಪ್ರಸಿದ್ಧ ಅಮರನಾಥ ಯಾತ್ರೆಯನ್ನು ಈ ಬಾರಿ ನಡೆಸಲು ಜಮ್ಮು ಮತ್ತು ಕಾಶ್ಮೀರ ಆಡಳಿತವು ನಿರ್ಧರಿಸಿದ್ದು, ಈ ಸಂಬಂಧ ಸಕಲ ಸಿದ್ಧತೆ ಕೈಗೊಳ್ಳುವಂತೆ ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದೆ.

60 ದಿನಗಳ ಕಾಲ ನಡೆಯುವ ವಾರ್ಷಿಕ ಯಾತ್ರೆಯಲ್ಲಿ ಪಾಲ್ಗೊಳ್ಳುವ ಯಾತ್ರಾರ್ಥಿಗಳಿಗೆ ಅಗತ್ಯ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಹಾಗೂ ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ನಿರ್ವಹಿಸುವಂತೆ ನಿರ್ದೇಶನ ನೀಡಲಾಗಿದೆ.

ಈ ಸಂಬಂಧ ಗುರುವಾರ ಸಭೆ ನಡೆಸಿರುವ ಕಾಶ್ಮೀರ ವಿಭಾಗೀಯ ಆಯುಕ್ತ ಪಾಂಡುರಂಗ ಕೆ.ಪೋಲೆ, ‘ಏಪ್ರಿಲ್‌ ಮೊದಲ ವಾರದಿಂದಲೇ ಅಗತ್ಯ ಕಾಮಗಾರಿಗಳನ್ನು ಆರಂಭಿಸಿ ಮೇ 15ರ ಒಳಗೆ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು’ ಎಂದು ಸೂಚನೆ ನೀಡಿದ್ದಾರೆ.

ADVERTISEMENT

‘ಕಳೆದ ಮೂರು ವರ್ಷಗಳಿಂದ ಯಾತ್ರೆ ನಡೆಯದಿರುವ ಕಾರಣ ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯ ಯಾತಾರ್ಥಿಗಳು ಬರುವ ಸಾಧ್ಯತೆಯಿದ್ದು, ಶಿಬಿರದ ಪ್ರದೇಶ, ವಾಹನ ನಿಲುಗಡೆ ಪ್ರದೇಶ ವಿಸ್ತರಣೆ ಹಾಗೂ ಆರೋಗ್ಯ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ವ್ಯವಸ್ಥೆಯನ್ನು ಶೇ 50ರಷ್ಟು ಹೆಚ್ಚಳ ಮಾಡುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಸರ್ಕಾರದ ವಕ್ತಾರರು ತಿಳಿಸಿದರು.

ಕೋವಿಡ್‌ನಿಂದಾಗಿ 2020 ಹಾಗೂ 2021ರಲ್ಲಿ ಅಮರನಾಥ ಯಾತ್ರೆ ರದ್ದುಗೊಳಿಸಲಾಗಿತ್ತು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370 ನೇ ವಿಧಿ ರದ್ದುಗೊಳಿಸಿದ ನಂತರ ಭಯೋತ್ಪಾದನಾ ಕೃತ್ಯದ ಬೆದರಿಕೆಯ ಹಿನ್ನೆಲೆಯಲ್ಲಿ 2019ರಲ್ಲೂ ವಾರ್ಷಿಕ ಯಾತ್ರೆ ರದ್ದುಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.